ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರೈತರಿಗೆ ಜಾನುವಾರುಗಳ ಮ್ಯಾಟ್ ವಿತರಣಾ ಹಾಗೂ ೯ನೇ ಕಾಲು-ಬಾಯಿ ಜ್ವರ ಲಸಿಕಾ ಅಭಿಯಾನದ ಕಾರ್ಯಕ್ರಮದಲ್ಲಿ ಗೋವಿಗೆ ಪೂಜೆ ಸಲ್ಲಿಸಿ ಮಾತನಾಡಿದರು.ಹೈನುಗಾರಿಕೆ ಕ್ಷೇತ್ರದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ವಿಧಾನಗಳ ಅಳವಡಿಕೆ ದಿನೇದಿನೇ ಹೆಚ್ಚುತ್ತಿದೆ. ಹಿಂದಿನ ಪರಂಪರಾಗತ ಪದ್ಧತಿಗಳನ್ನು ಮೀರಿ ರೈತರು ಆಧುನಿಕ ವಿಧಾನಗಳತ್ತ ಮುಖ ಮಾಡುತ್ತಿರುವುದು ಗ್ರಾಮೀಣ ಆರ್ಥಿಕತೆಗೆ ಬಲ ತುಂಬುತ್ತಿದೆ. ಜಾನುವಾರುಗಳಿಗೆ ಆರಾಮದಾಯಕ ವಾತಾವರಣ ಕಲ್ಪಿಸಿ ಅವುಗಳ ಆರೋಗ್ಯ ಮತ್ತು ಹಾಲು ಉತ್ಪಾದನೆ ಹೆಚ್ಚಿಸಲು ಅಗತ್ಯವಾಗಿದೆ. ಅದರಂತೆ ಸರ್ಕಾರವು ಹೈನುಗಾರಿಕೆಯನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಹಾಯಧನದಡಿ ಮ್ಯಾಟ್‌ಗಳ ವಿತರಣೆ ಮಾಡಲಾಗುತ್ತಿದೆ. ರೈತರು ೫೦ಶೇಕಡಾ ಮೊತ್ತವನ್ನು ಪಾವತಿಸಿದಲ್ಲಿ ಈ ಮ್ಯಾಟ್‌ಗಳನ್ನು ಪಡೆಯಬಹುದಾಗಿದೆ. ಜಾನುವಾರುಗಳಿಗೆ ತಂಪು ಮತ್ತು ಸ್ವಚ್ಛ ವಾತಾವರಣ ಒದಗಿಸುವ ಈ ಮ್ಯಾಟ್‌ಗಳು ಹಾಲಿನ ಉತ್ಪಾದನೆ ಹೆಚ್ಚಿಸುವುದಲ್ಲದೆ, ರೋಗಗಳ ನಿಯಂತ್ರಣಕ್ಕೂ ಸಹಕಾರಿ. ರೈತನ ಮನೆಯಲ್ಲಿ ಹಸು ಇದ್ದರೆ ಅದು ಎಟಿಎಂ ಇದ್ದಂತೆ ಎಂದು ತಿಳಿಸಿದರು. ಹಾಲು ಒಕ್ಕೂಟದ ನಿರ್ದೇಶಕ ಎಂ.ಕೆ. ಪ್ರಕಾಶ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಕಾಲು-ಬಾಯಿ ಜ್ವರ ನಿರ್ಮೂಲನೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ ತಾಲೂಕಿನಲ್ಲಿ ಸುಮಾರು ೪೮ ಸಾವಿರ ಲಸಿಕೆಗಳನ್ನು ನೀಡಲಾಗಿದ್ದು, ಇದಕ್ಕಾಗಿ ಸುಮಾರು ೧೫ ಲಕ್ಷ ರು. ವೆಚ್ಚ ಮಾಡಲಾಗಿದೆ. ಈ ವರ್ಷವೂ ಲಸಿಕಾ ಕಾರ್ಯಕ್ರಮವನ್ನು ಇನ್ನಷ್ಟು ವ್ಯಾಪಕವಾಗಿ ಜಾರಿಗೊಳಿಸಲಾಗುತ್ತಿದೆ. ಈ ಬಾರಿ ಒಕ್ಕೂಟದಿಂದ ೨೬ ಸಾವಿರ ಜಾನುವಾರುಗಳಿಗೆ ವಿಮಾ ಯೋಜನೆ ಜಾರಿಗೆ ತರಲಾಗಿದೆ. ತಾಪಮಾನ ಹೆಚ್ಚಿದ್ದರೂ ರೈತರು ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸುತ್ತಿರುವುದರಿಂದ ಹಾಲಿನ ಉತ್ಪಾದನೆ ಹೆಚ್ಚುತ್ತಿದೆ ಹಾಲು ಒಕ್ಕೂಟವು ಯಾವುದೇ ದಿನ ರಜೆ ಇಲ್ಲದೆ ರೈತರಿಂದ ಹಾಲು ಸ್ವೀಕರಿಸುತ್ತಿದ್ದು, ಹಾಲನ್ನು ಮೌಲ್ಯವರ್ಧನೆ ಮಾಡಲು ಒಕ್ಕೂಟವು ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.ತಾಲೂಕು ಪಶು ವೈದ್ಯಾಧಿಕಾರಿ ಡಾ. ನಂದೀಶ್ ಮಾತನಾಡಿ ತಾಲೂಕಿನಲ್ಲಿ ೯ನೇ ಸುತ್ತಿನ ಕಾಲು-ಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಪ್ರತಿದಿನ ಬೆಳಿಗ್ಗೆ ಸಮಯದಲ್ಲಿ ತಮ್ಮ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದಾರೆ. ತೀವ್ರ ಬಿಸಿಲಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಈ ಸಮಯವನ್ನು ನಿಗದಿಪಡಿಸಲಾಗಿದೆ. ಕಾಲು-ಬಾಯಿ ಜ್ವರ ನಿಯಂತ್ರಣವು ಹೈನುಗಾರಿಕೆಗೆ ಅತ್ಯಂತ ಮುಖ್ಯವಾಗಿದೆ. ಸಮಯಕ್ಕೆ ಸರಿಯಾಗಿ ಲಸಿಕೆ ನೀಡಿದರೆ ಜಾನುವಾರುಗಳ ಆರೋಗ್ಯ ಕಾಪಾಡಬಹುದು. ರೈತರು ಜಾನುವಾರಗಳಿಗೆ ಮ್ಯಾಟ್ ಹಾಕುವುದರ ಮೂಲಕ ಜಾನುವಾರುಗಳ ಸುರಕ್ಷತೆ ಹಾಗೂ ಅನೇಕ ರೋಗಗಳನ್ನು ತಡೆಗಟ್ಟಬಹುದು. ಈ ಬಾರಿ ೫೦ ಸಾವಿರ ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆ ಅಧಿಕಾರಿಗಳು, ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅನೇಕ ರೈತರು ಭಾಗವಹಿಸಿದ್ದರು.