ಶಾಸಕ ಎಚ್. ಪಿ. ಸ್ವರೂಪ್ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಬಸವಣ್ಣನವರ “ಮಾನವ ಜನ್ಮ ಮುಖ್ಯವಲ್ಲ, ಮಾನವೀಯತೆ ಮುಖ್ಯ” ಎಂಬ ವಚನವನ್ನು ಉಲ್ಲೇಖಿಸಿ, ಸಮಾಜದಲ್ಲಿ ಮಾನವೀಯತೆ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಹೇಳಿದರು. ಪತಂಜಲಿ ಯೋಗ ಪರಿವಾರವು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು. ನಗರದ ಕೆರೆಗಳು ಉಳಿದರೆ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಕೆರೆಗಳು ಕೇವಲ ನೀರಿನ ಸಂಗ್ರಹಣಾ ಕೇಂದ್ರಗಳಲ್ಲ, ಅವು ಜೀವ ವೈವಿಧ್ಯದ ಮೂಲವಾಗಿವೆ. ಅವುಗಳನ್ನು ಉಳಿಸಿ ಅಭಿವೃದ್ಧಿಪಡಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ರಿಂಗ್ ರಸ್ತೆ ಸಮೀಪದಲ್ಲಿರುವ ಸತ್ಯಮಂಗಲ ಕೆರೆ ಪಾರ್ಕ್‌ನಲ್ಲಿ ಸುಗ್ಗಿ ಯೋಗ ಕೇಂದ್ರ, ಸತ್ಯಮಂಗಲ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಪತಂಜಲಿ ಯೋಗ ಪರಿವಾರ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸುಗ್ಗಿ ಯೋಗ ಕೇಂದ್ರದ ವಾರ್ಷಿಕೋತ್ಸವ ಸಮಾರಂಭವನ್ನು ಅತ್ಯಂತ ವೈಭವದಿಂದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಆರೋಗ್ಯಕರ ಜೀವನಶೈಲಿ, ಯೋಗಾಭ್ಯಾಸದ ಮಹತ್ವ, ಕೆರೆಗಳ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿ ಕುರಿತಾಗಿ ವಿಶಿಷ್ಟ ಸಂದೇಶಗಳನ್ನು ನೀಡಲಾಯಿತು.ಕಾರ್ಯಕ್ರಮವನ್ನು ಶಾಸಕ ಎಚ್. ಪಿ. ಸ್ವರೂಪ್ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಬಸವಣ್ಣನವರ “ಮಾನವ ಜನ್ಮ ಮುಖ್ಯವಲ್ಲ, ಮಾನವೀಯತೆ ಮುಖ್ಯ” ಎಂಬ ವಚನವನ್ನು ಉಲ್ಲೇಖಿಸಿ, ಸಮಾಜದಲ್ಲಿ ಮಾನವೀಯತೆ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಹೇಳಿದರು. ಪತಂಜಲಿ ಯೋಗ ಪರಿವಾರವು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು. ನಗರದ ಕೆರೆಗಳು ಉಳಿದರೆ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಕೆರೆಗಳು ಕೇವಲ ನೀರಿನ ಸಂಗ್ರಹಣಾ ಕೇಂದ್ರಗಳಲ್ಲ, ಅವು ಜೀವ ವೈವಿಧ್ಯದ ಮೂಲವಾಗಿವೆ. ಅವುಗಳನ್ನು ಉಳಿಸಿ ಅಭಿವೃದ್ಧಿಪಡಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಎಸ್. ಎಂ. ಕೃಷ್ಣ ಲೇಔಟ್‌ನಲ್ಲಿ ಸುಮಾರು ನಾಲ್ಕು ಕೋಟಿ ರುಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇದೇ ಮಾದರಿಯಲ್ಲಿ ಸತ್ಯಮಂಗಲ ಕೆರೆ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಸತ್ಯಮಂಗಲ ಕೆರೆ ಅಭಿವೃದ್ಧಿಯಾದರೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಜನರಿಗೆ ಬೆಳಿಗ್ಗೆ-ಸಂಜೆ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ವಾತಾವರಣ ದೊರೆಯಲಿದೆ. ಕೆರೆ ಕಟ್ಟೆಗಳನ್ನು ಉಳಿಸಿ, ಪಾರ್ಕ್‌ಗಳನ್ನು ಸುಂದರಗೊಳಿಸುವ ಕೆಲಸಕ್ಕೆ ಶಾಸಕನಾಗಿ ನನಗೆ ವಿಶೇಷ ಆಸಕ್ತಿ ಇದೆ. ಸರ್ಕಾರದಿಂದ ಅನುದಾನ ಕಡಿಮೆ ಬಂದರೂ ಸಹ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದರು.ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ಅನುದಾನದಲ್ಲಿಯೂ ಹಲವಾರು ಪಾರ್ಕ್‌ಗಳು ಅಭಿವೃದ್ಧಿಗೊಂಡಿರುವುದನ್ನು ಸ್ಮರಿಸಿದ ಅವರು, ಜನಪ್ರತಿನಿಧಿಗಳು ಜನರ ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಎಷ್ಟೇ ಹಣವಿದ್ದರೂ ಆರೋಗ್ಯ ಇಲ್ಲದಿದ್ದರೆ ಬದುಕು ಅರ್ಥಹೀನ. ಪತಂಜಲಿ ಯೋಗ ಪರಿವಾರದವರು ಜನರ ಆರೋಗ್ಯ ಕಾಪಾಡುವ ಸೇವೆ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್. ಆರ್. ಸತ್ಯವತಿ ಮಹಿಳಾ ಸಂಬಂಧಿತ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿ, ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಇಂದಿನ ವೇಗದ ಜೀವನದಲ್ಲಿ ಜನರು ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಆದರೆ ಉತ್ತಮ ನಿದ್ರೆ, ಸಮತೋಲನ ಆಹಾರ, ಯೋಗಾಭ್ಯಾಸ ಮತ್ತು ಮಾನಸಿಕ ಶಾಂತಿ ಇವುಗಳೇ ನಿಜವಾದ ಶ್ರೀಮಂತಿಕೆ ಎಂದು ಹೇಳಿದರು.“ಯಾರು ಏಳು ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ, ಯಾರು ಔಷಧಿ ಮಾತ್ರೆಗಳ ಅವಲಂಬನೆಯಿಲ್ಲದೆ ಬದುಕುತ್ತಾರೆ, ಯಾರು ಯಾವುದೇ ಒತ್ತಡವಿಲ್ಲದೆ ಸಂತೋಷದಿಂದ ಜೀವನ ನಡೆಸುತ್ತಾರೆ ಹಾಗೂ ಹೊಟ್ಟೆ ತುಂಬ ಊಟ ಮಾಡಿ ಅದನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ ಅವರೇ ನಿಜವಾದ ಶ್ರೀಮಂತರಾಗುತ್ತಾರೆ” ಎಂದು ಅವರು ಹೇಳಿದರು. ಹಣಕ್ಕಿಂತ ಆರೋಗ್ಯವೇ ಅಮೂಲ್ಯ. ರೋಗ ಬಂದಾಗ ಮೊದಲು ಆರೋಗ್ಯ ಮರಳಿ ಸಿಗಲಿ ಎಂಬುದೇ ಎಲ್ಲರ ಪ್ರಾರ್ಥನೆ ಆಗುತ್ತದೆ ಎಂದು ತಿಳಿಸಿದರು. ನಿವೃತ್ತಿ ನಂತರ ಮೊಬೈಲ್‌ಗಳಲ್ಲಿ ಕಾಲ ಕಳೆಯುವುದಕ್ಕಿಂತ ಯೋಗಾಭ್ಯಾಸ ಮತ್ತು ಕುಟುಂಬದ ಜೊತೆ ಸಮಯ ಕಳೆಯುವುದು ಉತ್ತಮ. ಪ್ರತಿದಿನ ಸ್ವಲ್ಪ ಸಮಯ ಯೋಗಕ್ಕೆ ಮೀಸಲಿಟ್ಟರೆ ಆಸ್ಪತ್ರೆ ಮತ್ತು ಔಷಧಿಗಳ ಅವಶ್ಯಕತೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ವಿಶೇಷವಾಗಿ ಮಹಿಳೆಯರು ಕುಟುಂಬದ ಆರೋಗ್ಯದ ಕೇಂದ್ರೀಯ ಶಕ್ತಿ. ಅವರು ಆರೋಗ್ಯವಾಗಿದ್ದರೆ ಮನೆ ಆರೋಗ್ಯವಾಗಿರುತ್ತದೆ ಎಂದು ಹೇಳಿದರು.ಕಾನೂನುಗಳ ಬಗ್ಗೆ ತಿಳಿದುಕೊಳ್ಳಿ:
ಮಹಿಳೆಯರ ಮೇಲಿನ ದೌರ್ಜನ್ಯ ಹಲವು ರೂಪಗಳಲ್ಲಿ ನಡೆಯುತ್ತಿದ್ದು, ಅದು ಸಮಾಜದ ದೊಡ್ಡ ದುರ್ಬಲತೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಾಸನದಲ್ಲಿಯೂ ವೇಶ್ಯಾವಾಟಿಕೆ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ಬಡ ಮಹಿಳೆಯರನ್ನು ಕೆಲಸ ಕೊಡಿಸುವ ಆಮಿಷವಿಟ್ಟು ನಂತರ ತಪ್ಪು ದಾರಿಗೆ ಕೊಂಡೊಯ್ಯುವ ಘಟನೆಗಳು ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು. ಹೆಣ್ಣುಮಕ್ಕಳು ಮೊದಲು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು. ಮಹಿಳೆಯರಿಗಾಗಿ ಸರ್ಕಾರದಿಂದ ಸಾಕಷ್ಟು ಕಾನೂನುಗಳು ಜಾರಿಯಲ್ಲಿವೆ. ಆದರೆ ಅವುಗಳ ಅರಿವು ಇಲ್ಲದ ಕಾರಣ ಅನೇಕರು ನ್ಯಾಯದಿಂದ ವಂಚಿತರಾಗುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು ಮತ್ತೊಬ್ಬ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸಿ ಪರಸ್ಪರ ಬೆಂಬಲ ನೀಡಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ ಅಗ್ನಿಹೋತ್ರದೊಂದಿಗೆ ಪ್ರಾರಂಭವಾಯಿತು. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯೋಗಾಭ್ಯಾಸಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಸತ್ಯಮಂಗಲ ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಮನವಿಯನ್ನು ಶಾಸಕರಿಗೆ ಸಲ್ಲಿಸಲಾಯಿತು. ಸುಗ್ಗಿ ಯೋಗ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಯೋಗ ಪ್ರದರ್ಶನ, ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, ಗುರುವಂದನೆ, ಸದಸ್ಯರಿಗೆ ಗೌರವ ಸಮರ್ಪಣೆ ಹಾಗೂ ವಿಶೇಷ ಅತಿಥಿಗಳಿಗೆ ಸನ್ಮಾನ ನಡೆಯಿತು. ಸ್ಥಳದಲ್ಲೇ ೨೦ ಮಹಿಳೆಯರಿಗೆ ಲಕ್ಕಿ ಡಿಪ್ ಮೂಲಕ ಬಹುಮಾನ ವಿತರಣೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಯಿತು. ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು. ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜಾಗೃತಿಯನ್ನು ಒಟ್ಟುಗೂಡಿಸಿದ ಈ ಸಮಾರಂಭವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.ಈ ಸಂದರ್ಭದಲ್ಲಿ ವೇದಭಾರತೀ ಸಂಯೋಜಕ ಹರಿಹರಪುರ ಶ್ರೀಧರ್, ಪತಂಜಲಿ ಯೋಗ ಪರಿವಾರ ಜಿಲ್ಲಾ ಮಹಿಳಾ ಪ್ರಭಾರಿ ಶಾರದಾ ಧಮಾನಂದ್, ಜಿಲ್ಲಾ ಕಿಸಾನ್ ಪ್ರಭಾರಿ ನಾಗೇಶ್, ಜಿಲ್ಲಾ ಯುವ ಪ್ರಭಾರಿ ಕೆ.ಎನ್. ದೊರೆಸ್ವಾಮಿ, ಸತ್ಯಮಂಗಲ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಎಂ. ಆರ್. ಚಂದ್ರಶೇಖರ್, ಡಾ. ಜಿ.ಡಿ. ನಾರಾಯಣ್, ಮಂಜರಾಜು, ಪಿ. ರವಿಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಸಮಾಜ ಕಲ್ಯಾಣ ಅಧಿಕಾರಿ ಮನು, ಡಾ. ಜಯದೇವೇಗೌಡ, ಪವಿತ್ರ, ಪ್ರದೀಪ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.