ಒತ್ತಡದಿಂದ ಯುವಕರಲ್ಲಿ ಹೃದಯಾಘಾತ ಹೆಚ್ಚಳ

KannadaprabhaNewsNetwork | Published : Jul 2, 2025 12:20 AM
1ಎಚ್ಎಸ್ಎನ್5 :  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ವತಿಯಿಂದ ತಾಲೂಕಿನ ೨೦ಕ್ಕೂ ಹೆಚ್ಚು ವೈದರನ್ನು ಸನ್ಮಾನಿಸಲಾಯಿತು. | Kannada Prabha

ಒತ್ತಡದ ಜೀವನದಿಂದ ಯುವ ಜನಾಂಗದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಖ್ಯಾತ ಹೃದ್ರೋಗ ತಜ್ಞರಾದ ಇಂಡಿಯಾನ ಆಸ್ಪತ್ರೆಯ ವೈದ್ಯ ಡಾ. ಅನೂಪ್ ತಿಳಿಸಿದರು‌. ಯಾವುದೇ ಹೃದಯಸ್ಥಂಭನ ಸಂದರ್ಭದಲ್ಲಿ ಅವರಿಗೆ ಮೊದಲು ಪ್ರಥಮ ಚಿಕಿತ್ಸೆ ನೀಡುವುದು ಅತಿಮುಖ್ಯ. ಕೆಲವರಲ್ಲಿ ಕೊರೋನಾ ಸಂದರ್ಭದಲ್ಲಿ ನೀಡಿದ ವ್ಯಾಕ್ಸಿನ್‌ನಿಂದಾಗಿ ಹೆಚ್ಚಾಗಿ ಹೃದಯಸ್ಥಂಭನ ಆಗುತ್ತದೆ ಎಂಬುದು ತಪ್ಪು ಕಲ್ಪನೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಒತ್ತಡದ ಜೀವನದಿಂದ ಯುವ ಜನಾಂಗದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಖ್ಯಾತ ಹೃದ್ರೋಗ ತಜ್ಞರಾದ ಇಂಡಿಯಾನ ಆಸ್ಪತ್ರೆಯ ವೈದ್ಯ ಡಾ. ಅನೂಪ್ ತಿಳಿಸಿದರು‌. ಪಟ್ಟಣದ ವೈಷ್ಣವ ಗೋಷ್ಠಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಕೇವಲ ೨೫ರಿಂದ ೪೦ ವರ್ಷದ ವಯಸ್ಸಿನವರಲ್ಲಿ ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿ ವಿಷಯ. ಯುವ ಜನಾಂಗದಲ್ಲಿ ದುಶ್ಚಟಗಳು ಹೆಚ್ಚಾಗಿ ಗೋಚರಿಸುತ್ತಿರುವುದು ಒಂದು ಕಾರಣವಾದರೆ, ಮಾನಸಿಕವಾಗಿ ಒತ್ತಡದ ಬದುಕಿನಲ್ಲಿ ಜೀವಿಸುತ್ತಿರುವುದು ಇನ್ನೊಂದು ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಪೋಷಕರು ಯಾವುದೇ ರೀತಿಯಲ್ಲಿ ಒತ್ತಡ ಹೇರದೆ ಅವರಿಗೆ ಉತ್ತಮ ಆಹಾರ ಪದ್ಧತಿ ಅಳವಡಿಸಿಲು ಸೂಚಿಸಬೇಕು. ಜಂಕಫುಡ್ ಆಹಾರಗಳನ್ನು ಮೊದಲು ದೂರ ಮಾಡಬೇಕು. ಇದರ ಜೊತೆಯಲ್ಲಿ ಕೆಲವು ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಯುವಕರು ತಮ್ಮ ಶಿಕ್ಷಣದ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ವ್ಯಾಯಾಮ ಹಾಗು ಇನ್ನಿತರ ಆಟೋಟ ಚಟುವಟಿಕೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ಅವರು ತೊಡಗಿಸಿಕೊಂಡಾಗ ಕಾಯಿಲೆಗಳಿಂದ ದೂರವಿರಬಹುದು. ಪ್ರತಿನಿತ್ಯ ಸುಮಾರು ೮ ಗಂಟೆಗಳ ಕಾಲ ನಿದ್ರೆಗೆ ಅವಕಾಶ ನೀಡಬೇಕು. ಅಂತಹವರಿಗೆ ಯಾವುದೇ ರೋಗಲಕ್ಷಣ ಕಂಡು ಬರುವುದಿಲ್ಲ. ಯಾವುದೇ ಹೃದಯಸ್ಥಂಭನ ಸಂದರ್ಭದಲ್ಲಿ ಅವರಿಗೆ ಮೊದಲು ಪ್ರಥಮ ಚಿಕಿತ್ಸೆ ನೀಡುವುದು ಅತಿಮುಖ್ಯ. ಕೆಲವರಲ್ಲಿ ಕೊರೋನಾ ಸಂದರ್ಭದಲ್ಲಿ ನೀಡಿದ ವ್ಯಾಕ್ಸಿನ್‌ನಿಂದಾಗಿ ಹೆಚ್ಚಾಗಿ ಹೃದಯಸ್ಥಂಭನ ಆಗುತ್ತದೆ ಎಂಬುದು ತಪ್ಪು ಕಲ್ಪನೆ ಎಂದರು.ಹಿಮ್ಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿ ಹಾಗೂ ಡಾ. ಹರ್ಷ ಮಾತನಾಡಿ, ಯುವ ಜನಾಂಗದಲ್ಲಿ ಬದಲಾದ ಜೀವನ ಶೈಲಿ ಅಸಮರ್ಪಕ, ಸಂಸ್ಕರಿಸದ ಆಹಾರ ಪದ್ಧತಿಯಿಂದ ಇಂತಹ ಹೃದಯಾಘಾತ ಸಂಭವಿಸುತ್ತಿದೆ. ನಿದ್ರಾಹೀನತೆ, ಅತಿಯಾದ ಮೊಬೈಲ್ ಬಳಕೆ, ದೀರ್ಘ ಒತ್ತಡ ಸೇರಿದಂತೆ ಇನ್ನಿತರ ಮಾನಸಿಕವಾಗಿ ನೋವು ಅನುಭವಿಸಿದಾಗ ಇಂತಹ ಹೃದಯಾಘಾತ ಹೆಚ್ಚಾಗುತ್ತಿದೆ. ನಮ್ಮ ಕಿಮ್ಸ್ ಆಸ್ಪತ್ರೆಯ ಸಂಶೋಧನೆಯ ಪ್ರಕಾರ ಹದಿಹರೆಯದ ಮಕ್ಕಳಲ್ಲಿ ಹೃದಯಘಾತ ಹೆಚ್ಚಳಕ್ಕೆ ಅತಿಯಾದ ಮೊಬೈಲ್ ಬಳಕೆ ಕಾರಣ ಎಂದು ತಿಳಿದು ಬಂದಿದೆ. ಉತ್ತಮ ಆಹಾರ ಪದ್ಧತಿಯನ್ನು ಆರೋಗ್ಯದಲ್ಲಿ ಅಳವಡಿಸಿಕೊಂಡರೆ ಇಂತಹ ಕಾಯಿಲೆಗಳಿಂದ ದೂರ ಉಳಿಯಬಹುದು‌ ಎಂದರು.ಇದೇ ವೇಳೆ ತಾಲೂಕಿನ ೨೦ಕ್ಕೂ ಹೆಚ್ಚು ವೈದರನ್ನು ಸ್ಪಂದನ ಸಿರಿವೇದಿಕೆ ತಾಲೂಕು ಘಟಕದಿಂದ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸ್ಪಂದನ ಸಿರಿವೇದಿಕೆ ಜಿಲ್ಲಾಧ್ಯಕ್ಷೆ ಆಶಾಕಿರಣ್, ಕಾಂಗ್ರೆಸ್ ಮುಖಂಡ ಬಿ.ಎಂ ಸಂತೋಷ್, ಆರೋಗ್ಯ ಅಧಿಕಾರಿ ಡಾ. ವಿಜಯ್, ಪತ್ರಕರ್ತರ ಸಂಘದ ಅದ್ಯಕ್ಷ ರಘುನಾಥ್, ಕೆಡಿಪಿ ಸದಸ್ಯೆ ಸೌಮ್ಯ ಆನಂದ್, ಡಾ ಶ್ರೀಧರ್, ಡಾ ರಾಘವೇಂದ್ರ, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರನಾಥ್, ಡಾ. ನಾರಾಯಣಸ್ವಾಮಿ, ಪ್ರತಿಮಾಮಯ್ಯ, ವೈದ್ಯರಾದ ಡಾ. ನರಸೇಗೌಡ, ಡಾ,ಚಂದ್ರಮೌಳಿ, ಡಾ. ಸತೀಶ್, ಡಾ. ರಘುಕಿರಣ್, ಡಾ. ಸುಧಾ, ಡಾ. ಮಮತಾ, ಡಾ. ಅಶ್ವತ್ಥ್ ಇತರರು ಹಾಜರಿದ್ದರು.

====

ಫೊಟೋ:1ಎಚ್ಎಸ್ಎನ್5 : ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ವತಿಯಿಂದ ತಾಲೂಕಿನ ೨೦ಕ್ಕೂ ಹೆಚ್ಚು ವೈದರನ್ನು ಸನ್ಮಾನಿಸಲಾಯಿತು.