ಶಿರಸಿ: ಉತ್ತಮ ಆರೋಗ್ಯದಿಂದ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಬಹುದು ಎಂದು ಟಿಎಸ್‌ಎಸ್ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ಟ ತಿಳಿಸಿದರು.ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಶಾಖೆ, ಗ್ರೀನ್ ಕೇರ್ ಶಿರಸಿ ಹಾಗೂ ಇಕೋ ಕೇರ್ ಸಹಯೋಗದೊಂದಿಗೆ ನಡೆದ ಸಮಗ್ರ ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರನ್ನು ಉತ್ತಮ ಆರೋಗ್ಯದತ್ತ ಮುಖ ಮಾಡಬಹುದು ಎಂದರು.ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಹೊಸಮನಿ ಮಾತನಾಡಿ, ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಗಮನ ಕೊಡಬೇಕು ಎಂದರು.ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ ಮಾತನಾಡಿ, ಪ್ರತಿಯೊಬ್ಬ ಪ್ರಜೆಯು ಕೆಲಸದ ಒತ್ತಡದ ನಡುವೆಯೂ ಉತ್ತಮ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರೀನ್ ಕೇರ್ ಸಂಸ್ಥೆಯ ಅಧ್ಯಕ್ಷ ಜಿತೇಂದ್ರ ಮಾತನಾಡಿ, ಇಂದು ಪ್ರತಿಯೊಬ್ಬ ಉದ್ಯೋಗಿಯು ಕೆಲಸದ ಒತ್ತಡದ ಜತೆಗೆ ಇರುವುದರಿಂದ ಒತ್ತಡ ಕಡಿಮೆಯಾದಾಗ ಮಾತ್ರ ಉತ್ತಮ ಆರೋಗ್ಯ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಿ ವಹಿಸಬೇಕು ಎಂದರು.ಇಕೋ ಕೇರ್ ಸಂಸ್ಥೆಯ ಅಧ್ಯಕ್ಷ ಸುನಿಲ್ ಭೋವಿ ಮಾತನಾಡಿ, ಆರೋಗ್ಯವನ್ನು ಕಾಪಾಡುವಲ್ಲಿ ಸಮುದಾಯಗಳ ಪಾತ್ರ ಪ್ರಾಮುಖ್ಯವಾದುದು ಎಂದರು. ತಾಲೂಕು ಕ್ಷಯರೋಗ ಮೇಲ್ವಿಚಾರಕ ಉದಯಶಂಕರ್ ಮಾತನಾಡಿ, ಕ್ಷಯಮುಕ್ತ ಭಾರತಕ್ಕಾಗಿ ಇಡೀ ದೇಶ ಶ್ರಮಿಸುತ್ತಿದ್ದು, ಕ್ಷಯರೋಗ ತಡೆಯುವಲ್ಲಿ ನೂರು ದಿನಗಳ ಕ್ಷಯರೋಗ ಅಭಿಯಾನವನ್ನು ಪ್ರಾರಂಭಿಸಿದೆ ಎಂದರು.ಸಭಾ ಕಾರ್ಯಕ್ರಮದ ನಂತರ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಅಗತ್ಯ ಔಷಧಗಳನ್ನು ನೀಡಲಾಯಿತು. ಅಲ್ಲದೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು. ಕ್ಷಯ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಸಮಗ್ರ ಆಪ್ತ ಸಮಾಲೋಚನೆ ಹಾಗೂ ರಕ್ತ ತಪಾಸಣೆ ಕೈಗೊಳ್ಳಲಾಯಿತು. ಕೌನ್ಸಿಲರ್ ಗಿರಿಜಾ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಸ್ವಾಗತಿಸಿದರು. ಗೋಪಾಲ್ ಹೆಗಡೆ ನಿರೂಪಿಸಿದರು. ವೇದವತಿ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಟಿಎಸ್‌ಎಸ್ ಸಂಸ್ಥೆಯ ಉದ್ಯೋಗಿಗಳು, ಸಿಬ್ಬಂದಿ, ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ, ಕ್ಷಯ, ಐಟಿಸಿಟಿ, ಎಆರ್‌ಟಿ, ವಿಭಾಗದ ಸಿಬ್ಬಂದಿ ಇದ್ದರು.