ಧಾರವಾಡ:
ಡೆಂಘೀ ವಿಚಾರದಲ್ಲಿ ಧಿಕಾರಿಗಳು ನಿರ್ಲಕ್ಷ್ಯ ಮಾಡಬೇಡಿ. ಜಿಲ್ಲಾಸ್ಪತ್ರೆಯಲ್ಲಿ ಡಿಎಸ್ ಸೇರಿದಂತೆ ಹಿರಿಯ ವೈದ್ಯರು ಪ್ರತಿ ದಿನ ವಾರ್ಡ್‌ಗಳಿಗೆ ಭೇಟಿ ನೀಡಬೇಕು. ರೋಗಿಗಳಿಗೆ ಅಗತ್ಯ ಸೇವೆ ಸಿಗದ ಬಗ್ಗೆ ದೂರು ಬಂದಲ್ಲಿ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವೈದ್ಯರಿಗೆ ಎಚ್ಚರಿಕೆ ನೀಡಿದರು.ಜಿಲ್ಲಾಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಸಚಿವರು, ಡೆಂಘೀ ವಾರ್ಡ್‌ನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಜತೆಗೆ ಅಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಬಳಿಕ ಎಲುಬು-ಕಿಲು ವಾರ್ಡ್, ಮಕ್ಕಳ ವಾರ್ಡ್ ಮತ್ತು ಫಾರ್ಮಸಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಡಿಎಸ್ ಸೇರಿದಂತೆ ಹಿರಿಯ ವೈದ್ಯರು ವಾರ್ಡ್‌ಗಳಿಗೆ ಭೇಟಿ ನೀಡಿ, ಸಕಾಲಕ್ಕೆ ಅಗತ್ಯ ಚಿಕಿತ್ಸೆ, ಔಷಧಿ ಸಿಗುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ರೋಗಿಗಳ ಅಹವಾಲುಗಳಿದ್ದರೆ ಆಲಿಸಬೇಕು ಎಂದರು.
ಜಿಲ್ಲಾಸ್ಪತ್ರೆಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಈಗಾಗಲೇ ₹ 9.9 ಕೋಟಿ ಅನುದಾನ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸಲಾಗುವುದು. ಕ್ರಿಯಾಯೋಜನೆಯಲ್ಲಿರುವ ಎಸ್‌ಟಿಪಿ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಆರಂಭಿಸುವಂತೆ ಶಸ್ತ್ರ ಚಿಕಿತ್ಸಕರಿಗೆ ಸಚಿವರು ನಿರ್ದೇಶಿಸಿದರು.ಜಿಲ್ಲಾಸ್ಪತ್ರೆಗೆ ಉತ್ತರ ಕನ್ನಡ, ಬೆಳಗಾವಿ, ಗದಗ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ನಿಭಾಯಿಸುವ ಜವಾಬ್ದಾರಿ ಇದೆ ಎಂದ ಸಚಿವರು, ಸರ್ಕಾರದ ಅನುದಾನದೊಂದಿಗೆ ವಿವಿಧ ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಪಡೆದು, ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಲಾಗುವುದು. ಅದಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 1500 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಸರಾಸರಿ ತಿಂಗಳಿಗೆ 28 ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಜಿಲ್ಲಾಸ್ಪತ್ರೆಗೆ ಔಷಧಿ, ಮೂಲಸೌಕರ್ಯಗಳ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆಸ್ಪತ್ರೆ ಅಭಿವೃದ್ಧಿಗಾಗಿ ಅಗತ್ಯ ಸೌಲಭ್ಯಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಇನ್ನಷ್ಟು ತಜ್ಞ ವೈದ್ಯರು, ನರ್ಸ್, ಸಿಬ್ಬಂದಿ ಬೇಕು ಎಂದು ಸಚಿವರ ಬಳಿ ಮನವಿ ಮಾಡಿಕೊಂಡರು.
ಜಿಪಂ ಸಿಇಒ ಸ್ವರೂಪ.ಟಿ.ಕೆ., ಜಿಲ್ಲಾಸ್ಪತ್ರೆ ತಜ್ಞ ವೈದ್ಯರಾದ ಡಾ. ಶ್ರೀಧರ ಪಾಟೀಲ, ಡಾ. ಶಿಲ್ಪಾ ಭಟ್, ಡಾ.ಪ್ರಭು ಸಂಗಮ ಸೇರಿದಂತೆ ವಿವಿಧ ತಜ್ಞ ವೈದ್ಯರು, ಸ್ನಾತಕೊತ್ತರ ವೈದ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮೂವರಿಗೆ ಡೆಂಘೀ:
ಮಹಿಳೆ, ಮಕ್ಕಳು, ವಯಸ್ಕರು ಸೇರಿ 49 ಜನ ಡೆಂಘೀ ಶಂಕಿತರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಮೂವರಿಗೆ ಡೆಂಘೀ ಖಚಿತಪಟ್ಟಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಉಳಿದ ಎಲ್ಲ ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಹೇಳಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲೆಯಲ್ಲಿ ಈ ವರೆಗೆ 1765 ಜನರಿಗೆ ಡೆಂಘೀ ಪರೀಕ್ಷೆ ಮಾಡಲಾಗಿದೆ. 334 ಜನರಲ್ಲಿ ಡೆಂಘೀ ದೃಢಪಟ್ಟಿದ್ದು, ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಲಾಗಿದೆ. ಶುಕ್ರವಾರ ಜಿಲ್ಲಾಸ್ಪತ್ರೆ, ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆ ಸೇರಿ 15 ಜನ ಡೆಂಘೀ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಚಿವರಿಗೆ ತಿಳಿಸಿದರು.