ಗಣಿಗಾರಿಕೆಯಿಂದ ರೈತರು, ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದ ಡಿಸಿ ಜಿ. ಪ್ರಭು
ಜಿಲ್ಲೆಯಲ್ಲಿ ಸುರಕ್ಷಿತ ಹಾಗೂ ನಿಯಮಬದ್ಧವಾಗಿ ಗಣಿಗಾರಿಕೆ ನಡೆಸುವ ಕುರಿತು ಗಣಿ ಮಾಲೀಕರು ಮತ್ತು ಸಂಬಂಧಪಟ್ಟವರಿಗೆ ಅರಿವು ಮೂಡಿಸಬೇಕು. ನಿಯಮಗಳನ್ನು ಪಾಲಿಸದೆ ಗಣಿಗಾರಿಕೆ ನಡೆಸುವುದು ಕಂಡುಬಂದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಸಂಘಟನಾತ್ಮಕವಾಗಿ ಏಕಕಾಲದಲ್ಲಿ ದಾಳಿ ನಡೆಸಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿಗಾರಿಕೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದ ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ,ಮಂಡಿಕಲ್ಲು ಹೋಬಳಿಯ ಸುತ್ತಮುತ್ತಲಿನ ಕಲ್ಲುಪುಡಿ ಘಟಕಗಳಿಂದ ಉಂಟಾಗುತ್ತಿರುವ ಧೂಳು, ಟಿಪ್ಪರ್ ಲಾರಿಗಳ ಸಂಚಾರ, ರಸ್ತೆ ಹಾಳಾಗುತ್ತಿರುವುದು ಹಾಗೂ ಬೆಳೆಗಳಿಗೆ ಹಾನಿಯಾಗುತ್ತಿರುವ ಕುರಿತು ರೈತರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ರೈತರಿಗೆ ಭರವಸೆ ನೀಡಿದರು.ಕಲ್ಲುಪುಡಿ ಘಟಕಗಳಿಂದ ಹೊರಬರುವ ಧೂಳಿನಿಂದಾಗಿ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಟಿಪ್ಪರ್ ಲಾರಿಗಳ ನಿರಂತರ ಓಡಾಟದಿಂದ ರಸ್ತೆಗಳು ಗುಂಡಿಬಿದ್ದು ಹದಗೆಟ್ಟಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಕ್ರಷರ್‌ಗಳಿಂದ ಹೊರಸೂಸುವ ಧೂಳಿನಿಂದ ಕೃಷಿ ಬೆಳೆಗಳು ನಾಶವಾಗುತ್ತಿದ್ದು, ಜಾನುವಾರುಗಳಿಗೆ ಅಗತ್ಯವಾದ ಮೇವು ಲಭ್ಯತೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ರೈತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಧೂಳಿನ ಸಮಸ್ಯೆ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಅಲ್ಪಾವಧಿ ಹಾಗೂ ದೀರ್ಘಾವಧಿಯ ಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮಗಳ ಕುರಿತು ಸಮಾಲೋಚನೆ ನಡೆಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆ ನಡೆಸಿ, ಸಮಸ್ಯೆಯ ಸಂಪೂರ್ಣ ಪರಿಶೀಲನೆ ನಡೆಸಲಾಗುವುದು. ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲುಪುಡಿ ಘಟಕಗಳ ಕಾರ್ಯಾಚರಣೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ರೈತರೊಂದಿಗೆ ಸಭೆ ನಡೆಸಿ, ಕಲ್ಲುಪುಡಿ ಘಟಕಗಳಿಂದ ಉಂಟಾಗುತ್ತಿರುವ ತೊಂದರೆಗಳ ಕುರಿತು ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರೈತರಿಂದ ಸಮಸ್ಯೆಗಳ ಕುರಿತು ಮಾಹಿತಿ ಹಾಗೂ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ಪಡೆದುಕೊಂಡರು.
ಸಿಕೆಬಿ-1 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿಗಾರಿಕೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಸ್ವೀಕಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು.