ಹುಬ್ಬಳ್ಳಿ:
ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹು-ಧಾ ಪೊಲೀಸ್ ಕಮೀಷನರೇಟ್ ನೇತೃತ್ವದಲ್ಲಿ ಆಯೋಜಿಸಿದ್ದ ಗಣೇಶ ಹಬ್ಬದ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣೇಶೋತ್ಸವದ ಹೆಸರಿನಲ್ಲಿ ನಿಯಮ ಉಲ್ಲಂಘಿಸುವವರನ್ನು ಸುಮ್ಮನೆ ಬಿಡುವುದಿಲ್ಲ. ರಾತ್ರಿ 10ರ ಬಳಿಕ ಡಿಜೆ ಬಳಕೆಗೆ ಅವಕಾಶವಿಲ್ಲ. 80 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಮಾಡಿದ ಡಿಜೆ ವಾಹನ ಜಪ್ತಿ ಮಾಡುವ ಜತೆಗೆ ಸಂಬಂಧಿಸಿದ ಗಣೇಶೋತ್ಸವ ಮಂಡಳಿಯ ಪದಾಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು. ಸಾಂಪ್ರದಾಯಿಕ ವಾದ್ಯಮೇಳಗಳಿಗೆ ಮಾತ್ರ ರಾತ್ರಿ 12ರ ವರೆಗೆ ಅವಕಾಶವಿದೆ ಎಂದರು.ವಿಸರ್ಜನಾ ಮೆರವಣಿಗೆಯ ಟ್ರ್ಯಾಕ್ಟರ್‌ನಲ್ಲಿ ಪೊಲೀಸ್ ಸಿಬ್ಬಂದಿ ಇರಲಿದ್ದು, ಮೊಬೈಲ್ ಆ್ಯಪ್ ಮೂಲಕ ಶಬ್ದಮಟ್ಟ ಪರಿಶೀಲಿಸಲಾಗುವುದು. ಅಶ್ಲೀಲ ಹಾಗೂ ಪ್ರಚೋದನಕಾರಿ ಹಾಡುಗಳಿಗೆ ಕಡಿವಾಣ ಹಾಕಲಾಗುವುದು. ಮದ್ಯ, ಗಾಂಜಾ ಅಥವಾ ಇತರ ಮಾದಕ ವಸ್ತು ಸೇವಿಸಿ ಮೆರವಣಿಗೆಯಲ್ಲಿ ಕಾಣಿಸಿಕೊಂಡರೆ ಶೂನ್ಯ ಸಹಿಷ್ಣುತೆ ನೀತಿ ಅನ್ವಯವಾಗಲಿದೆ. ಆಲ್ಕೊ ಅನಲೈಸರ್, ನಾರ್ಕೋಟಿಕ್ಸ್ ಕಿಟ್ ಮೂಲಕ ತಪಾಸಣೆ ನಡೆಯಲಿದ್ದು, ಮಾರಕಾಸ್ತ್ರ ಪತ್ತೆಯಾದರೆ ರೌಡಿಶೀಟರ್ ತೆರೆಯುವ ಎಚ್ಚರಿಕೆ ನೀಡಿದರು.
ಧಾರವಾಡದ ವಿಜಯಾನಂದ ಸರಸ್ವತಿ ಶ್ರೀ ಮಾತನಾಡಿ, ಗಣೇಶೋತ್ಸವವು ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ವಿಶ್ವಾಸ ಬೆಳೆಸುವ ಹಬ್ಬವಾಗಬೇಕು. ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧರ್ಮಗಳ ಸಂಘ-ಸಂಸ್ಥೆಗಳ ಮುಖಂಡರನ್ನು ಗಣೇಶ ಮಂಡಳಿಗಳ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಒಟ್ಟಾಗಿ ಕಾರ್ಯಕ್ರಮ ನಡೆಸಬೇಕು. ಪೆಂಡಾಲ್‌ಗಳು ಸಂಸ್ಕೃತಿ ಕೇಂದ್ರಗಳಾಗಿ ಸ್ಥಳೀಯ ಕಲಾವಿದರು ಹಾಗೂ ಸಂಗೀತಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕ್ರೈಸ್ತ ಧರ್ಮಗುರು ಫಾದರ್ ಸುನೀಲಕುಮಾರ ಮಾತನಾಡಿ, ಇತರ ಧರ್ಮಗಳ ಆಚರಣೆಗಳಿಗೆ ಗೌರವ ನೀಡಿ, ಪರಿಸರ ಕಾಳಜಿಯೊಂದಿಗೆ ಹಬ್ಬ ಆಚರಿಸಬೇಕು ಎಂದು ಹೇಳಿದರು.
ಈ ವೇಳೆ ಗಣೇಶೋತ್ಸವ ಮಹಾಮಂಡಳಿಗಳ ಸದಸ್ಯರು ಮಾತನಾಡಿ, ಗಣೇಶ ಮೆರವಣಿಗೆಗೆ ರಸ್ತೆ ಗುಂಡಿಗಳಿಂದ ತೊಂದರೆಯಾಗದಂತೆ ತಕ್ಷಣ ದುರಸ್ತಿ ಮಾಡುವುದು. ವಿಸರ್ಜನಾ ಸ್ಥಳಗಳಲ್ಲಿ ನೀರಿನ ಟ್ಯಾಂಕರ್, ತಾತ್ಕಾಲಿಕ ಬಾವಿ, ಕ್ರೇನ್ ಹಾಗೂ ಸ್ವಚ್ಛತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಡಿಸಿಪಿ ರವೀಶ ಸಿ.ಆರ್. ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಉಪಮೇಯರ್ ರತ್ನಾಬಾಯಿ ನಾಝರೆ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಸೇರಿದಂತೆ ಗಣ್ಯರು, ವಿವಿಧ ಗಣೇಶ ಮಂಡಳಿಗಳ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಡಿಸಿಪಿ ಶ್ರುತಿ ಸ್ವಾಗತಿಸಿದರು.