ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಿದ್ಧತೆ ಕುರಿತ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಕೃಷಿ ಇಲಾಖೆಯಿಂದ ವಿತರಿಸುವ ಬೀಜಗಳು ಮಾತ್ರವಲ್ಲದೆ, ಖಾಸಗಿ ಡೀಲರ್‌ಗಳ ಬಳಿ ಲಭ್ಯವಿರುವ ಬೀಜಗಳ ಗುಣಮಟ್ಟದ ಮೇಲೂ ನಿಗಾ ಇಡಬೇಕು. ಕಡ್ಡಾಯವಾಗಿ ಮೊಳಕೆ ಒಡೆಯುವ ಸಾಮರ್ಥ್ಯದ ಪರೀಕ್ಷೆ ನಡೆಸಿದ ಬಳಿಕವೇ ಬಿತ್ತನೆ ಬೀಜಗಳನ್ನು ಪೂರೈಸಬೇಕು ಎಂದು ನಿರ್ದೇಶನ ನೀಡಿದರು.
ಖಾಸಗಿ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಹಾಗೂ ಲೂಸ್ ಸೀಡ್ಸ್ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಕಳಪೆ ಬೀಜಗಳಿಂದ ರೈತರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಹಿಂದೆ ಕಳಪೆ ಬೀಜ ಮಾರಾಟದ ಕುರಿತು ದೂರುಗಳು ಬಂದಿದ್ದು, ಈ ಬಾರಿ ಅಂತಹ ಯಾವುದೇ ದೂರುಗಳಿಗೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿದರು.ಜಿಲ್ಲೆಯ ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣದ ಬಿತ್ತನೆ ಬೀಜಗಳು ಖಾಸಗಿಯವರಿಂದ ಮತ್ತು ಇಲಾಖೆಯಿಂದ ವಿತರಣೆಯಾಗುತ್ತಿವೆ. ರೈತರು ಹೊರಗಿನಿಂದ ಯಾವೆಲ್ಲಾ ಬೀಜಗಳನ್ನು ತರುತ್ತಿದ್ದಾರೆ ಎಂಬ ನಿಖರವಾದ ಅಂಕಿ-ಅಂಶಗಳ ದಾಖಲೆಯನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು. ಫಸಲು ಬಾರದಿದ್ದಾಗ ರೈತರು ಆಕ್ಷೇಪಣೆ ಎತ್ತಿದರೆ, ಸೂಕ್ತ ತಾಂತ್ರಿಕ ವಿವರಣೆ ನೀಡಲು ಈ ಡೇಟಾ ಸಹಕಾರಿಯಾಗಲಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ಒಟ್ಟು 189 ಗ್ರಾಪಂಗಳು, 22 ಹೋಬಳಿಗಳು ಹಾಗೂ 1,009 ಗ್ರಾಮಗಳಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ .ಪೂರ್ವ ಮುಂಗಾರಿನಲ್ಲಿ ಸುಮಾರು 25 ಸಾವಿರದಿಂದ ದಿಂದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳ ಬಿತ್ತನೆಯಾಗುವ ನಿರೀಕ್ಷೆ ಇದೆ. ಮೆಕ್ಕೆಜೋಳವನ್ನು ಸುಮಾರು 95 ಸಾವಿರದಿಂದ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಶೇಂಗಾ ಬೆಳೆಯನ್ನು ಸುಮಾರು 95 ಸಾವಿರದಿಂದ 1,15,000 ಹೆಕ್ಟೇರ್ ಪ್ರದೇಶದವರೆಗೆ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ರಾಗಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿರುವುದರಿಂದ ಕಳೆದ ವರ್ಷ 58,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ರಾಗಿ ಬಿತ್ತನೆ ಪ್ರದೇಶ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದರು.
ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ಕೃಷಿ ಇಲಾಖೆ ಚಿತ್ರದುರ್ಗ ವಿಭಾಗ ಉಪನಿರ್ದೇಶಕ ಕೆ.ಎಸ್.ಶಿವಕುಮಾರ್, ತಹಸೀಲ್ದಾರ್‌ಗಳು, ಸಹಾಯಕ ಕೃಷಿ ನಿರ್ದೇಶಕರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.