ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸಾರ್ವಜನಿಕ ಅಹವಾಲು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲ್ಲೆ, ಹತ್ಯೆ ಸೇರಿದಂತೆ ಕೋಮು ಗಲಭೆ ಹಾಗೂ ಪ್ರಚೋದನೆಯ ಕೃತ್ಯಗಳಲ್ಲಿ ತೊಡಗಿರುವವರು ಅಕ್ರಮ ಚಟುವಟಿಕೆಗಳಲ್ಲೂ ಭಾಗಿಯಾಗಿರುತ್ತಾರೆ. ಆದರೆ, ಇಂತಹ ಪ್ರಕರಣಗಳಲ್ಲಿ ಸುಲಭವಾಗಿ ಜಾಮೀನು ದೊರೆಯುತ್ತದೆ. ಹಾಗಾಗಿ, ಕಾನೂನಿನ ಭಯ ಇಲ್ಲವಾಗುತ್ತಿದೆ. ಇದಕ್ಕಾಗಿ ಕಠಿಣ ಕಾನೂನಿನ ಅಗತ್ಯವಿದೆ ಎಂದು ಅವರು ಹೇಳಿದರು.
ಈ ರೀತಿ ಕೋಮು ಭಾಷಣಗಳನ್ನು ಮಾಡುವವರು ಹಿರಿಯ ನಾಯಕರೇ ಆಗಿರುತ್ತಾರೆ. ಯತ್ನಾಳ್ ಆದಿಯಾಗಿ ಜಿಲ್ಲೆಯ ಶಾಸಕರೂ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಆದರೂ ಸುಲಭವಾಗಿ ಜಾಮೀನು ದೊರೆಯುತ್ತದೆ. ಕೋಮು ಪ್ರಚೋದನೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರಿಗೂ ಸಂಘಟನೆಯ ಬೆಂಬಲ, ರಾಜಕೀಯ ರಕ್ಷಣೆ ಇದೆ. ಈಗಾಗಲೇ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಕೋಮು ಸಂಘರ್ಷ, ಗಲಭೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದವರು ಹೇಳಿದರು.ಯಾವುದೇ ಸಂಘಟನೆಯನ್ನು ಬ್ಯಾನ್ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ದಿನೇಶ ಗುಂಡೂರಾವ್ ಪ್ರತಿಕ್ರಿಯಿಸಿದರು.
ರಾಜೀನಾಮೆ ವಿಚಾರ ನನಗೆ ನೇರವಾಗಿ ಬರದು:ಯಾವುದೇ ವಿಚಾರದಿಂದ ಆಕ್ರೋಶಗೊಂಡು ಪಕ್ಷಕ್ಕೆ ರಾಜೀನಾಮೆ ನೀಡುವುದು ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅದು ನೇರವಾಗಿ ನನಗೆ ಸಂಬಂಧಪಡುವುದಿಲ್ಲ. ಪಕ್ಷದ ಮುಸ್ಲಿಂ ಮುಖಂಡರ ರಾಜೀನಾಮೆ ವಿಚಾರ ನನ್ನ ಬಳಿ ಬಂದಿಲ್ಲ. ನಾನು ಸರ್ಕಾರದ ಪ್ರತಿನಿಧಿ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಒಂದೇ ದೃಷ್ಟಿಯಿಂದ ನೋಡುತ್ತೇನೆ ಎಂದು ಹೇಳಿದರು.
ದ.ಕ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಮರು ಸ್ಥಾಪಿಸುವ ದೃಷ್ಟಿಯಲ್ಲಿ ಶೀಘ್ರವೇ ಶಾಂತಿ ಸಮಿತಿ ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು.ಮುಸ್ಲಿಂ ಮುಖಂಡನ ಹೊರ ಕಳುಹಿಸಿ ಎಂದ ದಿನೇಶ್:
ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ವೇಳೆ ಪ್ರಚೋದನಾಕಾರಿ ಭಾಷಣಗಳ ವಿಷಯದ ಪ್ರಸ್ತಾಪಗೊಂಡಿತು. ಆಗ ಅಲ್ಲಿದ್ದ ಕಾಂಗ್ರೆಸ್ ಮುಖಂಡ ಉಸ್ಮಾನ್ ಕಲ್ಲಾಪು ಎಂಬಾತ ಮಧ್ಯ ಪ್ರವೇಶಿಸಿ, ಬಜಪೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದಲೇ ಹತ್ಯೆ ನಡೆದಿದೆ ಎಂದು ಆರೋಪಿಸಿದರು.‘ಸುದ್ದಿಗೋಷ್ಠಿ ವೇಳೆ ಯಾರು ಈ ರೀತಿ ಮಾತನಾಡುವುದು? ಅವರನ್ನು ಹೊರಗೆ ಕಳುಹಿಸಿ’ ಎಂದು ಸಚಿವರು ಗದರಿದರು. ಈ ವೇಳೆ, ಐವನ್ ಡಿಸೋಜಾ ಅವರು ಆ ಮುಖಂಡರನ್ನು ಸಮಾಧಾನಗೊಳಿಸಿದರು.