ದಶಕಗಳು ಕಳೆದರೂ ಕೇಳುವವರಿಲ್ಲ ಗೋಳು । ಜನಪ್ರತಿನಿಧಿ ,ಅಧಿಕಾರಿಗಳ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ, ಶೃಂಗೇರಿ
ರಸ್ತೆಯುದ್ದಕ್ಕೂ ಮಣ್ಣು, ಅಲ್ಲಲ್ಲಿ ಕಿತ್ತೆದ್ದಿರುವ ಜಲ್ಲಿಕಲ್ಲುಗಳು, ಹೊಂಡಗುಂಡಿಗಳು. ಮಳೆ ಬಂದರೆ ರಸ್ತೆ ಎಲ್ಲಾ ಕೆಸರುಮಯ. ಓಡಾಡಲು ಸಾಹಸ ಪಡಬೇಕಾದ ಈ ರಸ್ತೆಗಳಿಗೆ ದಶಕಗಳೆ ಕಳೆದರೂ ಡಾಂಬರು ಕಾಣಿಸಿಲ್ಲ. ಇನ್ನು ಜನರಿಗೆ ಅಗತ್ಯವಾಗಿರುವ ಮೊಬೈಲ್ ನೆಟ್ ವರ್ಕ್ ಸಮಸ್ಯೆಗಂತು ಪರಿಹಾರವೇ ಒದಗಿಸದೇ ಮಾಗೋಡು ಜನರ ಮನವಿಗೆ ಸ್ಪಂದಿಸುವವರೇ ಇಲ್ಲದಾಗಿದೆ.ತುರ್ತು ಹಾಗೂ ಅಗತ್ಯ ಕೆಲಸ ಕಾರ್ಯ ಗಳಿಗೆ ಓಡಾಡಲು ರಸ್ತೆಯನ್ನೇ ಅವಲಂಬಿಸ ಬೇಕಿರುವುದರಿಂದ ತೊಂದರೆ ಈ ತಪ್ಪಿದ್ದಲ್ಲ. ರಸ್ತೆ ದುರಸ್ತಿ, ಡಾಂಬರೀಕರಣಕ್ಕಾಗಿ ಗ್ರಾಮಸ್ಥರು ಹಲವು ವರ್ಷಗಳಿಂದ ಅಹವಾಲು, ಮನವಿಗಳನ್ನು ನೀಡುತ್ತಾ ಬಂದಿದ್ದರೂ ಅಧಿಕಾರಿಗಳಾಗಲೀ, ಜನಪ್ರತಿನಿದಿಗಳಾಗಲೀ ಇತ್ತ ಗಮನವೇ ಹರಿಸಿಲ್ಲ. ಇನ್ನೂ ಸರ್ಕಾರಗಳ ಯೋಜನೆಗಳು, ಭಾಗ್ಯಗಳಿಂದ ದೂರವಾಗಿಯೇ ಉಳಿದಿದೆ ಮಾಗೋಡು.
ಈ ರಸ್ತೆಯಲ್ಲಿ ಬಸ್ ಸಂಚಾರ ಹೊರತುಪಡಿಸಿದರೆ ಖಾಸಗಿ ವಾಹನಗಳು ಓಡಾಡುತ್ತವೆ. ಡಾಂಬಾರು ಕಾಣದ ರಸ್ತೆಯಲ್ಲಿ ಇತರೆ ವಾಹನಗಳಿರಲಿ ಗ್ರಾಮಸ್ಥರೇ ಓಡಾಡಲು ಆಗುತ್ತಿಲ್ಲ. ಹೊಂಡಗುಂಡಿಗಳು,ಕೆಸರು, ಗುಡ್ಡದ ಮಣ್ಣೆಲ್ಲ ರಸ್ತೆಯ ಮೇಲೆ ಬಿದ್ದಿರುವುದರಿಂದ ಈ ರಸ್ತೆಯಲ್ಲಿ ನಡೆದರೆ ಕೆಸರುಗದ್ದೆಯಲ್ಲಿ ನಡೆಯುವಂತಾಗುತ್ತದೆ.
ಮಾಗೋಡು ಸುತ್ತಮುತ್ತ ಗ್ರಾಮದಲ್ಲಿ ಸುಮಾರು 1500 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರೆಲ್ಲ ಕೋಗಿನಬೈಲು, ಮಳೂರು, ಕೆಲ್ಲಾರು, ಮಾಗಲು, ತಲವಂತಿಕೊಡಿಗೆ ತಾರೊಳ್ಳಿಕೊಡಿಗೆ, ಮೀಗಾ, ಹಡಗಿನಕೊಪ್ಪ, ನಡುತೋಟ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನೆ ಬಳಸುವ ಅನಿವಾರ್ಯತೆಯೂ ಇದೆ. ಈ ಜನರ ಉಪಯೋಗಕ್ಕೆ ರಸ್ತೆ ದುರಸ್ತಿ ಅನಿವಾರ್ಯ. ಆದರೆ ಇದು ಜನಪ್ರತಿನಿಧಿಗಳಿಗೆ ಮಾತ್ರ ಅರಿವಿಗೆ ಬರುತ್ತಿಲ್ಲ.
ಇದು ರಸ್ತೆಯ ಕಥೆಯಾದರೇ ಇನ್ನೂ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಹೇಳತೀರದು. ಮಾಗೋಡು, ಮೇಲ್ ಘಟ್ಟ, ಚಟ್ಕುಣಿ, ಚೆನ್ನೆಗುಡ್ಡೆ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಸುಮಾರು 7-8 ಕಿಮಿ ದೂರದಲ್ಲಿರುವ ಕಿಗ್ಗಾ ಮೋಬೈಲ್ ಟವರ್ ನಿಂದ ಸಂಪರ್ಕವಿದ್ದರೂ ನೆಟ್ ವರ್ಕ್ ಪ್ರಯೋಜನಕ್ಕೆ ಬಾರದಂತಾಗಿದೆ. ಆರೋಗ್ಯ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆ ಉಂಟಾದರೆ ತುರ್ತು ಚಿಕಿತ್ಸೆ ಹಾಗೂ ಮಾಹಿತಿ ನೀಡಲು ಆಗದಂತಹ ಪರಿಸ್ಥಿತಿಯಿಂದ ಪರದಾಡಬೇಕಿದೆ. ಇತ್ತ ನೆಟ್ ವರ್ಕ್ ಇಲ್ಲ. ಅತ್ತ ಓಡಾಗಲು ರಸ್ತೆಯೂ ಸರಿಯಿಲ್ಲ. ಗ್ರಾಮಸ್ಥರ ಪರದಾಡ ಮಾತ್ರ ತಪ್ಪುತ್ತಿಲ್ಲ. ಗ್ರಾಮಸ್ಥರೂ ಸರ್ಕಾರದ ಯೋಜನೆಗಳು, ಭಾಗ್ಯಗಳಿಂದಲೂ ವಂಚಿತರಾಗಿದ್ದಾರೆ. ಮೂಲ ಸೌಕರ್ಯಗಳಿಂದಂತೂ ಬಲುದೂರ ಉಳಿದಿದ್ದಾರೆ.
-- ಬಾಕ್ಸ್--
ನಾವು ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಇದ್ದೇವೆ. ನಮ್ಮ ಮನವಿಗಳಿದೆ ಬೆಲೆಯೇ ಇಲ್ಲವಾಗಿದೆ. ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲಿ ಅಹವಾಲು ನೀಡಿದರೂ ಸ್ಪಂದಿಸುತ್ತಿಲ್ಲ. ಕೆಸರುಮಯವಾಗಿರುವ ರಸ್ತೆಯನ್ನು ಸರಿಪಡಿದಸಲು ಸರ್ಕಾರ ಈ ರಸ್ತೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಬೇಕು.
--
ಮೊಬೈಲ್ ನೆಟ್ ವರ್ಕ್ ಸಮಸ್ಯೆ ಸರಿಪಡಿಸಿ.....ರಸ್ತೆ ಸಮಸ್ಯೆ ಜೊತೆ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಕೂಡ ಈ ಭಾಗದ ಜನರ ಜ್ವಲಂತ ಸಮಸ್ಯೆಯಾಗಿದೆ. ಅಗತ್ಯ ಕೆಲಸ ಕಾರ್ಯಗಳಿಗೆ ಮೊಬೈಲ್ ನೆಟ್ ವರ್ಕ್ ಇಲ್ಲದೇ ಬಹಳ ತೊಂದರೆಯಾಗುತ್ತಿದೆ. ಆರೋಗ್ಯ, ತುರ್ತು ಸೇವೆಗಳಿಗೆ ನೆಟ್ ವರ್ಕ ಅಗತ್ಯವಿದೆ. ತುರ್ತಾಗಿ ಇಲ್ಲಿಗೊಂದು ಮೊಬೈಲ್ ಟವರ್ ನಿರ್ಮಾಣ ಮಾಡಿ.ಇಲ್ಲಿನ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿ ಶಾಶ್ವತ ಪರಿಹಾರ ನೀಡಬೇಕು.
- ಸುರೇಶ್ ಆಚಾರ್ . ಚಟ್ಕುಣಿ ಗ್ರಾಮಸ್ಥ.31 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನ ಕಿಗ್ಗಾ ಮಾಗೋಡು ಸಂಪರ್ಕ ರಸ್ತೆ ಹದಗೆಟ್ಟು ಕೆಸರುಮಯವಾಗಿರುವುದು.
31 ಶ್ರೀ ಚಿತ್ರ 2-ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದು.31 ಶ್ರೀ ಚಿತ್ರ 3-ಶರತ್ ಮಾಗೋಡು.ಗ್ರಾಮಸ್ಥ
31 ಶ್ರೀ ಚಿತ್ರ 4-ಸುರೇಶ್ ಆಚಾರ್.ಗ್ರಾಮಸ್ಥ.