ಧಾರವಾಡ: ತಾಲೂಕಿನ ಮಾದನಬಾವಿಯಲ್ಲಿನ ಸರ್ಕಾರಿ ಗೋ ಶಾಲೆಯ ದಯನೀಯ ಸ್ಥಿತಿ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರು ನಗರದ ಪಶು ಸಂಗೋಪನೆ ಇಲಾಖೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಗೋ ಶಾಲೆಯಲ್ಲಿ ಗೋವುಗಳಿಗೆ ನಿಲ್ಲಲು ಶೆಡ್‌ನಲ್ಲಿ ಜಾಗದ ಕೊರತೆ ಇದೆ. ಶೆಡ್ ಬಹಳ ಎತ್ತರಕ್ಕೆ ನಿರ್ಮಿಸಿದ್ದರಿಂದ ಮಳೆ ನೀರು ಗೋವುಗಳಿಗೆ ತಾಕುವುದು, ಕುಡಿಯುವ ನೀರು, ಉತ್ತಮ ಮೇವಿನ ಕೊರತೆ ಕಾಡುತ್ತಿದೆ. ಆರೋಗ್ಯದ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳಿಗೆ ಔಷಧಿಗಳ ಕೊರತೆ ಸಹ ಉಂಟಾಗಿದೆ. ಇವೆಲ್ಲವನ್ನೂ ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಅನಾರೋಗ್ಯದಿಂದ ಮೃತಪಟ್ಟ ಗೋವುಗಳ ಅಂತ್ಯಕ್ರಿಯೆ ಮಾಡದೆ 4 ಮತ್ತು 5 ದಿನಗಳ ಕಾಲ ಅದೇ ಜಾಗದಲ್ಲಿ ಬಿಡುತ್ತಾರೆ. ಅಂತ್ಯಕ್ರಿಯೆಗೆ ತೋಡಿದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಗೋವುಗಳನ್ನು ನಾಯಿ, ಇತರ ಪ್ರಾಣಿಗಳು ತಿನ್ನುವಂತಾಗಿದೆ. ಸರ್ಕಾರಿ ಗೋ ಶಾಲೆಯಲ್ಲಿ ಇಷ್ಟೆಲ್ಲ ಅವಾಂತರಗಳಿದ್ದರೂ ಅಧಿಕಾರಿಗಳು ಸುಧಾರಣೆಗೆ ಮುಂದಾಗುತ್ತಿಲ್ಲ. ಕೂಡಲೇ ವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ನಂತರ ಪಶು ಸಂಗೋಪನಾ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಪಶು ಸಂಗೋಪನಾ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಮನವಿ ರವಾನಿಸಿದರು.