ನಗರದ ಆಡಳಿತ ಸೌಧದಲ್ಲಿ ಬೀಡಾಡಿ ದನಗಳ ನಿಯಂತ್ರಣ ಚರ್ಚೆ ಸಭೆಯಲ್ಲಿ ನಿರ್ಧಾರ
ಶಿರಸಿ ನಗರ ವ್ಯಾಪ್ತಿಯಲ್ಲಿನ ಬೀಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆ ನೇತೃತ್ವದಲ್ಲಿ ಪಶು ಸಂಗೋಪನಾ, ಪೊಲೀಸ್ ಹಾಗೂ ಇತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸಮಿತಿ ರಚಿಸಿ ಜಾನುವಾರುಗಳನ್ನು ಮನೆಯಲ್ಲಿಯೇ ಸಾಕುವಂತೆ ಹೇಳುವುದು. 10 ದಿನಗಳ ನಂತರ ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕುರಿತು ಸಂಸದ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಜಂಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರದ ಆಡಳಿತ ಸೌಧದಲ್ಲಿ ಮಂಗಳವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಜರುಗಿದ ಬೀಡಾಡಿ ದನಗಳ ನಿಯಂತ್ರಣ ಚರ್ಚೆ ಸಭೆಯಲ್ಲಿ ಅಧಿಕಾರಿಗಳ ಹಾಗೂ ಸಂಘ-ಸಂಸ್ಥೆ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬೀಡಾಡಿ ದನಗಳಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿದ್ದು, ಅವುಗಳಿಂದ ಉಂಟಾಗುತ್ತಿರುವ ತೊಂದೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ರಾತ್ರಿ ವೇಳೆ ಅಪಘಾತ ಉಂಟಾಗಿ ಸಾವು ನೋವು ಹೆಚ್ಚಾಗುತ್ತಿದೆ. ಅದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಹೆಚ್ಚು ದಾಖಲಾಗುತ್ತಿದೆ. ಸಾಮಾಜಿಕವಾಗಿಯೂ ಸಮಸ್ಯೆ ನಿರ್ಮಾಣವಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ದೊರಕಿಸಬೇಕಿದೆ. ಬೀಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆ ಹಾಗೂ ಪಶು ಸಂಗೋಪನಾ ಇಲಾಖೆಯ ಮೂಲಕವೇ ಕ್ರಮ ವಹಿಸಬೇಕಾಗಿದೆ ಎಂದರು.
ನಗರಸಭೆ ಪರಿಸರ ಅಭಿಯಂತರ ಶಿವರಾಜ ಕೆ. ಮಾತನಾಡಿ, ಶಿರಸಿ ನಗರದಲ್ಲಿ 500 ಜಾನುವಾರುಗಳಿಗೆ ಮಾಲೀಕರಿಲ್ಲ. 320 ಮಾಲಿಕರು ಇದ್ದಾರೆ ಎಂಬ ಅಂಕಿ-ಅಂಶವಿದೆ. ರಾಘವೇಂದ್ರ ಸರ್ಕಲ್ ಬಳಿಯ ಕೊಂಡವಾಡಿಯಲ್ಲಿ 20 ಜಾನುವಾರು ಇಡಬಹುದು ಎಂದರು.
ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ, ವಕೀಲ ಸದಾನಂದ ಭಟ್ಟ ನಿಡಗೋಡ ಮಾತನಾಡಿದರು.
ನಗರಸಭೆಯಿಂದ ನಗರ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ನಿಯಂತ್ರಣಕ್ಕೆ ಜಾಗೃತಿ ಮೂಡಿಸುವುದು. ಮನೆಯಲ್ಲಿಯೇ ಸಾಕುವಂತೆ ತಿಳಿಸುವುದು. 10 ದಿನಗಳ ನಂತರ ಅವುಗಳನ್ನು ಕೊಂಡವಾಡಿಗೆ ಸಾಗಿಸಿ, ನಿರ್ವಹಿಸುವುದು. ಸಾರ್ವಜನಿಕರ ಪ್ರಕಟಣೆ ಹೊರಡಿಸಿ ಮಾಲೀಕರು ಇದ್ದರೆ ಬಂದು ಜಾನುವಾರು ತೆಗೆದುಕೊಂಡು ಹೋಗುವಂತೆ ಪ್ರಕಟಣೆ ಹೊರಡಿಸುವುದು. ಮಾಲೀಕರು ಬಂದರೆ ಅವರಿಗೆ ದಂಡ ವಿಧಿಸಿ, ಬೀದಿ ಮೇಲೆ ದನ ಬಿಡದಂತೆ ಕರಾರುಪತ್ರ ತೆಗೆದುಕೊಳ್ಳುವುದು. ಮಾಲೀಕರಿಂದ ₹25 ದಂಡದ ಮೊತ್ತ ಹಾಗೂ ₹250ರಿಂದ 300 ನಿರ್ವಹಣಾ ವೆಚ್ಚವನ್ನು ಪಡೆಯುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.