ಬಹುತೇಕ ಬಡಾವಣೆಗಳು ಅಭಿವೃದ್ಧಿಗೊಂಡಿಲ್ಲ. ಭೂ ಪರಿವರ್ತನೆಗೊಂಡು ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನಾ ಇಲಾಖೆಯಿಂದ ಅನುಮೋದನೆಗೊಂಡಿರುವ ಲೇಔಟ್‌ಗಳ ಮಾಲೀಕರು ಹೇಳಿದ ದರಕ್ಕೆ ನಿವೇಶನ ಖರೀದಿಸುತ್ತಾರೆ.
ಕನಕಗಿರಿ: ಪಟ್ಟಣದಲ್ಲಿ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನಾ ಇಲಾಖೆಯಿಂದ ಅನುಮೋದನೆಗೊಂಡು ಅಭಿವೃದ್ಧಿಗೊಳ್ಳದೆ ಶೇ. ೬೦ರಷ್ಟು ನಿವೇಶನಗಳನ್ನು ಮಂಜೂರು ಮಾಡಿ ಫಾರಂ-೩ ನೀಡಿ ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರವೇ (ನಾರಾಯಣಗೌಡ ಬಣ)ಯಿಂದ ಮುಖ್ಯಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಕುರಿತು ಸಂಘಟನೆಯ ತಾಲೂಕಾಧ್ಯಕ್ಷ ಹರೀಶ ಪೂಜಾರ ಮಾತನಾಡಿ, ಕನಕಗಿರಿ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬಹುತೇಕ ಬಡಾವಣೆಗಳು ಅಭಿವೃದ್ಧಿಗೊಂಡಿಲ್ಲ. ಭೂ ಪರಿವರ್ತನೆಗೊಂಡು ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನಾ ಇಲಾಖೆಯಿಂದ ಅನುಮೋದನೆಗೊಂಡಿರುವ ಲೇಔಟ್‌ಗಳ ಮಾಲೀಕರು ಹೇಳಿದ ದರಕ್ಕೆ ನಿವೇಶನ ಖರೀದಿಸುತ್ತಾರೆ. ಇನ್ನೂ ಬಡಾವಣೆಗಳ ಮಾಲೀಕರಿಗೆ ಶೇ. ೪೦ರಷ್ಟು ನಿವೇಶನ ಬಿಡುಗಡೆಗೊಳಿಸಿದ ಬಳಿಕವೂ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ಅಭಿವೃದ್ಧಿ, ಉದ್ಯಾನ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಟ್ಟು ಸಂಬಂಧಿಸಿದ ಇಲಾಖೆಗಳಿಂದ ಎನ್‌ಒಸಿ ಪಡೆದ ಬಳಿಕ ಪಂಚಾಯತಿಯಿಂದ ಸೌಲಭ್ಯ ಒದಗಿಸಿರುವ ಬಗ್ಗೆ ಪರಿಶೀಲನೆ ನಡೆಸಿ ಇನ್ನುಳಿದ ಶೇ.೬೦ ರಷ್ಟು ನಿವೇಶನ ಮಂಜೂರು ಮಾಡಬೇಕು. ಆದರೆ, ಪಟ್ಟಣದ ಬಹುತೇಕ ಬಡಾವಣೆಗಳು ಅಭಿವೃದ್ಧಿಗೊಳ್ಳದೆ ನಿಯಮ ಉಲ್ಲಂಘನೆ ಮಾಡಲಾಗಿದೆ. ನಿವೇಶನ ಖರೀದಿಸಿದವರು ಮನೆ ನಿರ್ಮಿಸಿಕೊಂಡು ಮೂಲ ಸೌಲಭ್ಯಗಳಿಗೆ ಪರದಾಡುತ್ತಿದ್ದಾರೆ. ಕೆಲ ಲೇಔಟ್‌ಗಳಲ್ಲಿ ಲಿಂಕ್ ರಸ್ತೆ ತೋರಿಸಿ ಅದರ ದಾಖಲೆಗಳಿಲ್ಲದೇ ಓಡಾಡುವುದಕ್ಕೆ ಪರದಾಡುತ್ತಿದ್ದಾರೆ. ಇನ್ನೂ ಕೆಲ ಲೇಔಟ್‌ಗಳ ಮಾಲೀಕರು ಬೇರೆ ನಗರಗಳಲ್ಲಿ ವಾಸಿಸುತ್ತಿದ್ದರಿಂದ ಮಧ್ಯವರ್ತಿಗಳು ಮಾಲೀಕರಂತೆ ವರ್ತಿಸಿ ಫಾರಂ.೩ ನೀಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ, ಪಂಚಾಯತಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕರವೇ ಕಾರ್ಯಕರ್ತರಾದ ದೇಸಾಯಿಗೌಡ್ರ, ರವಿ ಬಲಿಜ, ಅಂಬರೀಶ ಪಟ್ಟಣಶೆಟ್ಟಿ, ಇಮಾಮಸಾಬ ಮೇಸ್ತ್ರಿ, ಮಲ್ಲಿಕಾರ್ಜುನ ಹಾದಿಮನಿ, ಮಂಜುನಾಥ ಅಕ್ಕಸಾಲಿಗ, ಮಂಜು ಕಂಪ್ಲಿ, ವಿಷ್ಣುರೆಡ್ಡಿ ಮಾದಿನಾಳ ಸೇರಿದಂತೆ ಇತರರು ಇದ್ದರು.
ಅಭಿವೃದ್ಧಿಗೊಳ್ಳದ ಬಡಾವಣೆಗಳಿಗೆ ನಿಯಮ ಬಾಹಿರವಾಗಿ ಫಾರಂ-೩ ನೀಡುವುದು ಮುಂದುವರೆದರೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಕರವೇ ಕಾರ್ಯಕರ್ತ ಬಸವರಾಜ ಕೋರಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.