ಆಹಾರ ಕಲಬೆರಕೆ, ಪ್ಲಾಸ್ಟಿಕ್‌ ಪೊಟ್ಟಣ ಬಳಕೆ ಬಗ್ಗೆ ಕಟ್ಟುನಿಟ್ಟಿನ ನಿಗಾ: ಡಾ.ಪ್ರವೀಣ್‌ ಕುಮಾರ್‌ ಸೂಚನೆ

KannadaprabhaNewsNetwork |  
Published : Apr 13, 2024, 01:04 AM IST
ಡಾ.ತಿಮ್ಮಯ್ಯ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಆಹಾರ ಗುಣಮಟ್ಟನಿಯಮದ ಪ್ರಕಾರ ಬಿಸಿಯಾದ ಆಹಾರವನ್ನು ಪ್ಲಾಸ್ಟಿಕ್‌ ಪೊಟ್ಟಣಗಳಲ್ಲಿ ಕಟ್ಟಿನೀಡುವಂತಿಲ್ಲ. ಆಹಾರವನ್ನು ಪೂರೈಕೆ ಮಾಡಲು ಅಲ್ಯುಮಿನಿಯಂ ಫಾಯಿಲ್‌ ಹಾಗೂ ಇತರ ಸುರಕ್ಷಿತ ವಿಧಾನಗಳನ್ನು ಮಾತ್ರವೇ ಬಳಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿ ಡಾ. ತಿಮ್ಮಯ್ಯ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಾದ್ಯಂತ ಹೊಟೇಲ್‌, ಬೀದಿ ಬದಿ ಆಹಾರ ತಯಾರಿ ಘಟಕಗಳ ಮೇಲೆ ನಿಗಾ ಇರಿಸಲಾಗಿದೆ. ಕಲಬೆರಕೆ, ಬಣ್ಣಗಳ ಬಳಕೆ ಹಾಗೂ ಪ್ಲಾಸ್ಟಿಕ್‌ ಪೊಟ್ಟಣಗಳಲ್ಲಿ ಆಹಾರ ಪೂರೈಕೆ ಮಾಡುವ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟಪರಿಶೀಲನಾ ಅಧಿಕಾರಿ ಡಾ. ಪ್ರವೀಣ್‌ ಕುಮಾರ್‌ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಕಲಬೆರಕೆಗೆ ಸಂಬಂಧಿಸಿ ಜಿಲ್ಲೆಯಾದ್ಯಂತ ನಿರಂತರ ತಪಾಸಣೆ ನಡೆಸಲಾಗುತ್ತಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ಈವರೆಗೆ ಮಂಗಳೂರು ನಗರದಲ್ಲಿ 42, ಬಂಟ್ವಾಳದಲ್ಲಿ 18, ಪುತ್ತೂರಿನಲ್ಲಿ 32, ಬೆಳ್ತಂಗಡಿಯಲ್ಲಿ 22 ಹೊಟೇಲ್‌ ಹಾಗೂ ಆಹಾರ ತಯಾರಿ ಘಟಕಗಳಿಗೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ಮಂಗಳೂರಿನ ಮಾಲ್‌ ಒಂದರ ಎರಡು ಆಹಾರ ಘಟಕಗಳಲ್ಲಿ ತಯಾರಾಗುತ್ತಿದ್ದ ಗೋಬಿ ಮಂಚೂರಿಯಲ್ಲಿ ಕಲರ್‌ ಬಳಸಲಾಗುತ್ತಿದ್ದು, ಆ ಘಟಕಗಳಿಗೆ ನೋಟೀಸ್‌ ನೀಡಿ ದಂಡ ಹಾಕಲಾಗಿದೆ. ಅದರ ವರದಿ ಆಧಾರದಲ್ಲಿಯೇ ರಾಜ್ಯದಲ್ಲಿ ಗೋಬಿ ಮಂಚೂರಿ ಕಲರ್‌ ಬಳಕೆ ನಿಷೇಧಕ್ಕೆ ಕ್ರಮ ವಹಿಸಲಾಗಿತ್ತು ಎಂದು ಪ್ರವೀಣ್‌ ಕುಮಾರ್‌ ತಿಳಿಸಿದರು.ಸುರಕ್ಷಿತ ಪ್ಯಾಕಿಂಗ್‌ ಬಳಸಿ: ನಗರದ ಹೊಟೇಲ್‌ಗಳು, ಆಹಾರ ಘಟಕಗಳಿಂದ ವಿವಿಧ ಆಹಾರ ಪೂರೈಕೆದಾರರಿಂದ ತರಿಸಲಾಗುವ ಸಂದರ್ಭದಲ್ಲಿಯೂ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಳಸಲಾಗುತ್ತಿದ್ದರೂ, ಆಹಾರ ಸುರಕ್ಷತಾ ಇಲಾಖೆಯಿಂದ ಕ್ರಮ ವಹಿಸಲಾಗುತ್ತಿಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ಗಮನ ಹರಿಸಲಾಗಿದೆ. ಆಹಾರ ಗುಣಮಟ್ಟನಿಯಮದ ಪ್ರಕಾರ ಬಿಸಿಯಾದ ಆಹಾರವನ್ನು ಪ್ಲಾಸ್ಟಿಕ್‌ ಪೊಟ್ಟಣಗಳಲ್ಲಿ ಕಟ್ಟಿನೀಡುವಂತಿಲ್ಲ. ಆಹಾರವನ್ನು ಪೂರೈಕೆ ಮಾಡಲು ಅಲ್ಯುಮಿನಿಯಂ ಫಾಯಿಲ್‌ ಹಾಗೂ ಇತರ ಸುರಕ್ಷಿತ ವಿಧಾನಗಳನ್ನು ಮಾತ್ರವೇ ಬಳಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿ ಡಾ. ತಿಮ್ಮಯ್ಯ ಸ್ಪಷ್ಟಪಡಿಸಿದರು.ಶಾಖಾಘಾತ ಬಗ್ಗೆ ಎಚ್ಚರಿಕೆ ವಹಿಸಿ: ಶಾಖಾಘಾತದ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ. ನವೀನ್‌ ಚಂದ್ರ ಕುಲಾಲ್‌, ವಾತಾವರಣದಲ್ಲಿ ಸಾಧಾರಣ ಉಷ್ಣತೆಗಿಂತ 4.5 ಡಿಗ್ರಿ ಸೆಲ್ಸಿಯಸ್‌ಗಿಂತ 6.4 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾದಾಗ ಶಾಖಾಘಾತ ಸಂಭವಿಸುತ್ತದೆ. ಇದರಿಂದ ಕೈಕಾಲು ಬಾವು, ಮೈಮೇಲೆ ಬೆವರು ಸಾಲೆ, ಮಾಂಸಖಂಡದಲ್ಲಿ ಊತ, ಎದೆಯಲ್ಲಿ ಹೃದಯಾಘಾತ ಮಾದರಿ ನೋವು ಕಾಣಿಸಿಕೊಳ್ಳಬಹುದು ಎಂದರು.

ನೀರಿನಂಶ ಅಧಿಕವಾಗಿ ಬಳಸುವುದು, ಅನಗತ್ಯವಾಗಿ ಬಿಸಿಲಿಗೆ ಓಡಾಟ, ಸೆಖೆಗೆ ಹಿತವಾದ ಬಟ್ಟೆಬಳಕೆ, ಮಕ್ಕಳು ಹಾಗೂ ಹಿರಿಯ ನಾಗರಿಕರು ಬಿಸಿಲಿಗೆ ಮೈಯೊಡ್ಡದಂತೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸದಾಶಿವ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಟ್ಟೂರಲ್ಲಿ ನೀರಿದ್ದರೂ ಬಳಕೆಗೆ ತೀವ್ರ ಬರ
ಅಡುಗೆ ಅನಿಲ ಕೃತಕ ಅಭಾವ: ಮಾರ್ಕ್ಸ್‌ವಾದಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ