ಕಂಪ್ಲಿ: ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ಸರ್ಕಾರ ಹಾಗೂ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಳ್ಳಾರಿ ಜಿಲ್ಲಾ ಬಿಸಿಯೂಟ ಸಹಾಯಕ ನಿರ್ದೇಶಕ ಶಿವನನಾಯ್ಕ ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಎನ್. ಚನ್ನಬಸವರಾಜ ಮಾತನಾಡಿ, ಅಡುಗೆ ಸಹಾಯಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದಿನನಿತ್ಯ ಸ್ನಾನ ಮಾಡಿ ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ತರಕಾರಿ ಹಾಗೂ ಪಡಿತರ ಸಾಮಗ್ರಿಗಳನ್ನು ಬಳಸುವಾಗ ಸ್ವಚ್ಛತೆಯತ್ತ ಹೆಚ್ಚಿನ ಗಮನ ನೀಡಬೇಕು. ಆಹಾರ ತಯಾರಿಕೆ ಹಾಗೂ ಬಡಿಸುವ ಸಂದರ್ಭದಲ್ಲಿ ಶುದ್ಧತೆ ಮತ್ತು ಆರೋಗ್ಯದ ನಿಯಮಗಳನ್ನು ಪಾಲಿಸಿದರೆ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಡುಗೆ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಮಾನಸಿಕ ಸದೃಢತೆಯೊಂದಿಗೆ ಕರ್ತವ್ಯ ನಿರ್ವಹಿಸುವುದು ಮುಖ್ಯ ಎಂದು ಹೇಳಿದರು.ಕಂಪ್ಲಿಯ ಶರತ್ ಗ್ಯಾಸ್ ಏಜೆನ್ಸಿಯ ಮಾಲೀಕ ಎಚ್. ಶ್ರೀನಿವಾಸ ಗ್ಯಾಸ್ ಸಿಲಿಂಡರ್ ಸುರಕ್ಷಿತ ಬಳಕೆ ಕುರಿತು ವಿವರವಾಗಿ ತಿಳಿಸಿದರು. ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಬಳಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಅನಿಲದ ಮಿತವ್ಯಯ ಬಳಕೆ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.