ಕಾರವಾರ: ಜಿಲ್ಲೆಯಲ್ಲಿ ಡೆಂಘೀ ಉಲ್ಬಣಗೊಳ್ಳದಂತೆ, ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ ಮತ್ತು ತಾಪಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಸೂಚಿಸಿದರು.
ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಗೂಡಂಗಡಿಗಳಲ್ಲಿ ಬಳಸಿ ಬಿಸಾಡುವ ಎಳನೀರಿನ ಚಿಪ್ಪುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಲಿದ್ದು, ಈ ಬಗ್ಗೆ ಗಮನ ಹರಿಸುವುದರ ಜತೆಗೆ, ಆರೋಗ್ಯ ಇಲಾಖೆಯಿಂದ ಸೂಚಿಸುವ ಡೆಂಘೀ ನಿಯಂತ್ರಣ ಕುರಿತ ಎಲ್ಲ ಕ್ರಮಗಳನ್ನು ಅನುಷ್ಠಾನಗೊಳಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದರು.
ಆರೋಗ್ಯ ಇಲಾಖೆಯ ಮೂಲಕ ಈಗಾಗಲೇ ಶಾಲಾ ಶಿಕ್ಷಕರಿಗೆ ಡೆಂಘೀ ನಿಯಂತ್ರಣ ಕ್ರಮಗಳ ಕುರಿತಂತೆ ತರಬೇತಿಯನ್ನು ನೀಡಲಾಗಿದ್ದು, ಶಿಕ್ಷಕರು ತಮ್ಮ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಮತ್ತು ಇತರೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸಿ ಅವರ ಮೂಲಕ ಮನೆ ಮನೆಗಳಿಗೆ ಜಾಗೃತಿ ಮೂಡುವಂತೆ ಮಾಡುವುದರ ಜತೆಗೆ ಶಾಲಾ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಜಿಲ್ಲೆಗೆ ಉದ್ಯೋಗ ಅರಸಿ ಬರುವ ಕಾರ್ಮಿಕರ ಮೂಲಕ ಡೆಂಘೀ ಹರಡುವ ಸಂಭವವಿದ್ದು, ವಲಸೆ ಕಾರ್ಮಿಕರು ಆಗಮಿಸಿದಾಗ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಅವರ ಆರೋಗ್ಯ ತಪಾಸಣೆ ಮಾಡಿಸಲು ಹಾಗೂ ಎಲ್ಲ ಕಟ್ಟಡ ಮಾಲೀಕರಿಗೆ ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಸೂಚನೆ ನೀಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡೆಂಘೀ ಪ್ರಕರಣಗಳ ಕುರಿತಂತೆ ಸಾರ್ವಜನಿಕ ತಪ್ಪು ಸಂದೇಶ ರವಾನೆಯಾಗಬಾರದು. ಪ್ರಕರಣಗಳ ಖಚಿತತೆಯ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಕರಣಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು.ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕ್ಯಾ. ರಮೇಶ ರಾವ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್ ಮೊದಲಾದವರು ಇದ್ದರು.