ಬೇಡಿಕೆಗಳು ಈಡೇರಿಸದಿದ್ದರೆ 11ರಿಂದ ಮುಷ್ಕರ

KannadaprabhaNewsNetwork |  
Published : Mar 09, 2026, 01:15 AM IST
8ಕೆಆರ್ ಎಂಎನ್ 1.ಜೆಪಿಜಿಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ಖಾಲಿ ಹುದ್ದೆಗಳ ಭರ್ತಿ ಮತ್ತು ಸಮರ್ಪಕವಾಗಿ ಔಷಧಿಗಳ ಸರಬರಾಜು ಸೇರಿದಂತೆ ಹಲವು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಮಾರ್ಚ್ 11ರಿಂದ ಮುಷ್ಕರ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಜಿಲ್ಲಾ ಶಾಖೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು

ರಾಮನಗರ: ಖಾಲಿ ಹುದ್ದೆಗಳ ಭರ್ತಿ ಮತ್ತು ಸಮರ್ಪಕವಾಗಿ ಔಷಧಿಗಳ ಸರಬರಾಜು ಸೇರಿದಂತೆ ಹಲವು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಮಾರ್ಚ್ 11ರಿಂದ ಮುಷ್ಕರ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಜಿಲ್ಲಾ ಶಾಖೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ರವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿಗೌಡ ಮತ್ತು ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿ ಬೇಡಿಕೆಗಳು ಈಡೇರದಿದ್ದರೆ ಎರಡು ಹಂತಗಳಲ್ಲಿ ಮುಷ್ಕರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಮಾರ್ಚ್ 11ರಿಂದ 15ರವರೆಗೆ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲಾ ವೃಂದದ ಅಧಿಕಾರಿ-ನೌಕರರು ಕಪ್ಪು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ. ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಾಗುವುದು. ಎರಡನೇ ಹಂತದಲ್ಲಿ ಮಾರ್ಚ್ 16ರಿಂದ ಬೇಡಿಕೆ ಈಡೇರುವವರೆವಿಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ-ನೌಕರರು ಕರ್ತವ್ಯಕ್ಕೆ ಅನಿರ್ಧಿಷ್ಟಾವಧಿವರೆಗೆ ಗೈರುಹಾಜರಾಗುವ ಮೂಲಕ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೇಡಿಕೆಗಳು ಏನೇನು ?

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡುವುದು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 03 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರಿ ಆದೇಶವಿದ್ದಾಗ್ಯೂ ಸಹ ಉಲ್ಲಂಘಿಸಿ 1973 ರಿಂದ ಇಲ್ಲಿಯವರೆಗೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿರುವುದಿಲ್ಲ. ಈ ಬಗ್ಗೆ ಶೀಘ್ರ ತಿದ್ದುಪಡಿ ಮಾಡಬೇಕು.

ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು. ಇಲಾಖೆಯ ಎಲ್ಲಾ ವೃಂದದ ಯಾವುದೇ ಅಧಿಕಾರಿ-ನೌಕರರಿಗೆ ಕಳೆದ 05 ವರ್ಷಗಳಿಂದ ಮುಂಬಡ್ತಿಗಳನ್ನು ನೀಡಿರುವುದಿಲ್ಲ. ಕೂಡಲೇ ಮುಂಬಡ್ತಿಗಳನ್ನು ನೀಡುವುದು. ನಿಯಮಗಳಲ್ಲಿದ್ದಂತೆ ಸೇವಾನಿರತ ಅಧಿಕಾರಿ-ನೌಕರರ ಉನ್ನತ ವ್ಯಾಸಂಗ/ ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡಬೇಕು. ಇಲಾಖೆಯ ವರ್ಗಾವಣೆ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೇ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್‌ ವರ್ಗಾವಣೆ ಮಾಡುತ್ತಿರುವುದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್-ಕೇಡರ್ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ-ನೌಕರರನ್ನೇ ನಿಯೋಜಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಇಲಾಖೆಯಲ್ಲಿ ಖಾಲಿ ಇರುವ ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಭರ್ತಿ ಮಾಡುವುದು.

ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಸಿಬ್ಬಂದಿಗೆ ಸಿಜಿಹೆಚ್ಎಸ್/ ಎಐಸಿಟಿಇ(ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿ) ವೇತನ ನೀಡುವುದು. ಗುತ್ತಿಗೆ ವೈದ್ಯರು-ನೌಕರರು ಹಾಗೂ ಎನ್ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲ ಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹ ಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳಾದ ಜಗಧೀಶ್, ರಾಮಸ್ವಾಮಿ ರವಿ, ಶಿವು, ಶಿವಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

8ಕೆಆರ್ ಎಂಎನ್ 1.ಜೆಪಿಜಿ

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಣನ್ನು ಗೌರವಿಸುವವನೇ ನಿಜವಾದ ಮನುಜ
ಹೆಣ್ಣು ಅಬಲೆಯಲ್ಲಿ ಸಬಲೆ: ಮಾಜಿ ಸಚಿವ ಆಂಜನೇಯ