- ರಾಷ್ಟ್ರವ್ಯಾಪಿ ಕಾರ್ಮಿಕ-ರೈತ ಸಂಘಟನೆಗಳಿಂದ ಹೋರಾಟ: ಪೋಸ್ಟರ್ ಬಿಡುಗಡೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಿನಕ್ಕೆ 8 ಗಂಟೆ ಕೆಲಸದ ಅವಧಿ, ಕೆಲಸ ಕಾಯಂ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು, ಇನ್ನಿತರೆ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕಾರ್ಪೋರೇಟ್ ಬಂಡವಾಳಗಾರರ ಪರ ರೂಪಿಸಿರುವ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ತಕ್ಷಣ ರದ್ದುಪಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಜು.9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದು, ನಗರದಲ್ಲಿ ಕಾರ್ಮಿಕ-ರೈತ ಸಂಘಟನೆಗಳ ಮುಖಂಡರು ನಗರದ ಶ್ರೀ ಜಯದೇವ ವೃತ್ತದಲ್ಲಿ ಈ ಕುರಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ. ಉಮೇಶ ಮಾತನಾಡಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಕಿಸಾನ್ ಮೋರ್ಚಾದಿಂದ 9ರಂದು ಜಯದೇವ ವೃತ್ತದಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗಿದೆ. ಅಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ ಎಂದರು.
ಈಗಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಆಶಾ-ಅಂಗನವಾಡಿ- ಬಿಸಿಯೂಟ ನೌಕರರಿಗೆ ರಾಷ್ಟ್ರವ್ಯಾಪಿ ₹26 ಸಾವಿರ ಹಾಗೂ ರಾಜ್ಯವ್ಯಾಪಿ ₹36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಗುತ್ತಿಗೆ, ಹೊರಗುತ್ತಿಗೆ, ನಿಗದಿತ ಅವಧಿಯ ಉದ್ಯೋಗ, ಅಪ್ರೆಂಟಿಸ್, ಟ್ರೈನಿ, ನ್ಯಾಪ್ಸ್ ಮುಂತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು. ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಕಟ್ಟಡ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಫೋಟೋಗ್ರಾಫರ್ಸ್, ಮೆಕಾನಿಕ್ಸ್, ಬೀಡಿ-ಅಗರಬತ್ತಿ, ಹೆಂಚು ಕಾರ್ಮಿಕರು, ಮೀನುಗಾರರು, ಇನ್ನಿತರ ಎಲ್ಲಾ ಅಸಂಘಟಿತ ಕಾರ್ಮಿಕರು ಮತ್ತು ಕೃಷಿ-ತೋಟ ಕಾರ್ಮಿಕರು ಸೇರಿದಂತೆ ಎಲ್ಲ ವಿಭಾಗದ ಕಾರ್ಮಿಕರಿಗೆ ಕನಿಷ್ಠ ಮಾಸಿಕ ₹9 ಸಾವಿರ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು ಎಂದರು.
ಈ ಸಂದರ್ಭ ರವಿ ನಾರಾಯಣ, ಸುರೇಶ್ ಯರಗುಂಟೆ, ಎಚ್ಕೆಆರ್ ಸುರೇಶ, ವಿ.ಲಕ್ಷ್ಮಣ್, ಆವರಗೆರೆ ಚಂದ್ರು, ಹೊನ್ನೂರು ಮುನಿಯಪ್ಪ, ಐರಣಿ ಚಂದ್ರು, ಅಣಬೇರು ತಿಪ್ಪೇಸ್ವಾಮಿ, ಸತೀಶ ಅರವಿಂದ, ಕೈದಾಳ್ ಮಂಜುನಾಥ, ಇ.ಶ್ರೀನಿವಾಸ್, ಕೆ.ಎಸ್.ಆದಿಲ್ ಖಾನ್, ಹೆಗ್ಗೆರೆ ರಂಗಪ್ಪ, ನರೇಗಾ ರಂಗನಾಥ, ಕೆ.ಎಚ್.ಆನಂದರಾಜ, ಸರೋಜಾ, ಹನುಮಂತಪ್ಪ, ಮಹಮ್ಮದ್ ರಫೀಕ್, ಶ್ರೀನಿವಾಸ ಮೂರ್ತಿ ಇತರರು ಇದ್ದರು.- - -
(ಕೋಟ್) ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಜಿಲ್ಲೆಯ ಕೆರೆಗಳನ್ನು ತುಂಬಿಸಲು ಸಮರ್ಪಕ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಎನ್‌ಪಿಎಸ್-ಯುಪಿಎಸ್ ರದ್ದುಪಡಿಸಿ, ಹಳೆ ಪೆನ್ಷನ್ ಸ್ಕೀಂ ಮರುಸ್ಥಾಪನೆ ಇತ್ಯಾದಿ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು.- ಡಾ. ಎ.ಬಿ.ರಾಮಚಂದ್ರಪ್ಪ, ರಾಜ್ಯ ಸಂಚಾಲಕ, ಮಾನವ ಬಂಧುತ್ವ ವೇದಿಕೆ
- - --7ಕೆಡಿವಿಜಿ6.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಜು.9ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೋಸ್ಟರ್‌ಗಳನ್ನು ಕಾರ್ಮಿಕ-ರೈತ ಸಂಘಟನೆಗಳ ಮುಖಂಡರು ಬಿಡುಗಡೆಗೊಳಿಸಿದರು.