ಬಾಲ ಕಾರ್ಮಿಕ ಮುಕ್ತ ಸಮಾಜಕ್ಕಾಗಿ ಶ್ರಮಿಸಿ

KannadaprabhaNewsNetwork |  
Published : Jun 14, 2025, 01:58 AM IST
ಬೆಳಗಾವಿಯಲ್ಲಿ ವಿಶ್ವ ಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ ಆಚರಿಸಲಾಯಿತು | Kannada Prabha

ಸಾರಾಂಶ

ಕಾಯ್ದೆಗಳ ಬಗ್ಗೆ ಅರಿತುಕೊಂಡು ಬಾಲ ಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಾಲಕಾರ್ಮಿಕ ವಿರೋಧಿ ದಿನ ಅರ್ಥಪೂರ್ಣ ಆಚರಣೆಗೆ ಬಾಲ ಕಾರ್ಮಿಕ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಕಾಯ್ದೆಗಳ ಬಗ್ಗೆ ಅರಿತುಕೊಂಡು ಬಾಲ ಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಹೇಳಿದರು.ಜಿಲ್ಲಾಡಳಿತ, ಜಿಪಂ, ಪೊಲೀಸ್, ಕಾರ್ಮಿಕ ಹಾಗೂ ಶಾಲಾ ಶಿಕ್ಷಣ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗುರುವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಗುವಿನ ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಕ್ಕೆ ಸೂಕ್ತವಲ್ಲದ ಯಾವುದೇ ಕೆಲಸ ಬಾಲ ಕಾರ್ಮಿಕ ಪದ್ಧತಿಯಾಗಿದೆ. ಬಾಲಕರನ್ನು ಕೆಲಸದಲ್ಲಿ ತೊಡಗಿಸಿಕೊಂಡರೆ ಅವರ ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಮಕ್ಕಳು ಶಾಲೆಯಿಂದ ವಂಚಿತರಾಗದಂತೆ ಸರ್ಕಾರಿ ಶಾಲೆಯಲ್ಲಿ ಕಡ್ಡಾಯ ಹಾಜರಾತಿ, ಉಚಿತ ಪುಸ್ತಕಗಳು ಸೇರಿಂತೆ ಅಗತ್ಯ ಸೌಕರ್ಯ ನೀಡಲಾಗುತ್ತಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಸಮಾಜದ ಅತೀದೊಡ್ಡ ಪಿಡುಗು. ೬ ರಿಂದ ೧೪ ವರ್ಷದ ಮಕ್ಕಳನ್ನು ಯಾವುದೇ ವ್ಯಾಪಾರ ಉದ್ಯಮ, ಅಂಗಡಿಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳಬಾರದು. ಇದರಿಂದ ತಂದೆ-ತಾಯಿ ಹಾಗೂ ಕೆಲಸಕ್ಕೆ ತೊಡಗಿಸಿಕೊಂಡವರಿಗೆ ಕಾಯ್ದೆಯ ಅನ್ವಯ ಕಾನೂನಾತ್ಮಕವಾಗಿ ಶಿಕ್ಷೆ ವಿಧಿಸಲಾಗುವುದು ಎಂದರು.

ಕಾಯ್ದೆಯ ಅರಿವು ಎಲ್ಲರೂ ಪಡೆದುಕೊಂಡು ಶಾಲೆ ಬಿಟ್ಟ ಮಕ್ಕಳನ್ನು, ಕೆಲಸದಲ್ಲಿ ತೊಡಗಿಕೊಂಡು ಮಕ್ಕಳನ್ನು ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಸಹ ಇನ್ನೂ ಕೆಲವೆಡೆ ಬಾಲ ಕಾರ್ಮಿಕ ಪದ್ಧತಿ ಕುರಿತು ಅಷ್ಟೊಂದು ಪರಿಣಾಮಕಾರಿ ಜಾಗೃತಿ ಇಲ್ಲದಂತಾಗಿದೆ. ಗ್ರಾಮೀಣ ಮಟ್ಟದ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ಆಗಬೇಕಿದೆ. ತಂದೆ ತಾಯಿ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಒದಗಿಸಬೇಕು ಎಂಬ ಅರಿವು ಮೂಡಿಸಬೇಕಿದೆ ಎಂದರು.

ಈಗಾಗಲೇ ಕುಟುಂಬ ನಿರ್ವಹಣೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಬಾಲ ಕಾರ್ಮಿಕರ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಪ್ರಾಮಾಣಿಕವಾಗಿ ಸಹಾಯವಾಣಿಗೆ ಕರೆ ಮಾಡಿ ಸಹಕಾರ ನೀಡಬೇಕು. ಜಿಲ್ಲೆ, ರಾಜ್ಯ, ದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿ ಮುಕ್ತವಾಗಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೊನಕೇರಿ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಮಾತನಾಡಿ, ಬಾಲ ಕಾರ್ಮಿಕ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿ ವರ್ಷ ಜೂ.೧೨ರಂದು ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನ ಆಚರಿಸಲಾಗುತ್ತಿದೆ. ಪ್ರಗತಿ ಸ್ಪಷ್ಟವಾಗಿದೆ ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಪ್ರಯತ್ನಗಳನ್ನು ವೇಗಗೊಳಿಸೋಣ ಎಂಬ ಘೋಷವಾಕ್ಯ ವಾಕ್ಯದೊಂದಿಗೆ ದುಡಿಮೆ ಬೇಡ ಶಿಕ್ಷಣ ಬೇಕು ಎಂಬ ಸಂದೇಶ ಸಮಾಜದಲ್ಲಿ ನೆಲೆಯೂರಬೇಕಿದೆ ಎಂದರು.

ಬಾಲ ಕಾರ್ಮಿಕರನ್ನು ರಕ್ಷಿಸಿ ಸರ್ಕಾರದ ನಿಯಮಾವಳಿಯ ಪ್ರಕಾರ ಶಿಕ್ಷಣ ಸವಲತ್ತು ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ದೇಶದ ಹಲವೆಡೆ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಫಿಯಾ ಬೆಳೆಯುತ್ತಿದೆ. ಇವೆಲ್ಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಗೆ ಕಾನೂನು ಕಾಯ್ದೆ ಜಾರಿಗೆ ತರಲಾಗಿದೆ. ಮಕ್ಕಳ ಮಾನಸಿಕ-ದೈಹಿಕ ಬೆಳವಣಿಗೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಸರಿಯಾದ ಮಾದರಿಯಲ್ಲಿ ಶಿಕ್ಷಣ, ಕ್ರೀಡೆ, ಕೌಶಲ್ಯ ತರಬೇತಿ ನೀಡಿದರೆ ದೇಶ ವಿಶ್ವದಲ್ಲೇ ಇನ್ನಷ್ಟು ಬಲಾಢ್ಯ, ಶ್ರೇಷ್ಠ ರಾಷ್ಟ್ರವಾಗಲಿದೆ ಎಂದು ತಿಳಿಸಿದರು.

ಉಪ ಕಾರ್ಮಿಕ ಆಯುಕ್ತ ಅಮರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ ಕಾರ್ಮಿಕ ಅನಿಷ್ಟ ಪದ್ಧತಿ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಬಾಲ ಕಾರ್ಮಿಕ ಪದ್ಧತಿ ಎಂಬ ಸಾಮಾಜಿಕ ಪಿಡುಗು ತೊಲಗಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಮಾತ್ರವಲ್ಲದೇ ಸಾರ್ವಜನಿಕರು ಸಹ ಸಹಕಾರ ನೀಡಬೇಕು ಎಂದರು.

ಪಠ್ಯ ಪುಸ್ತಕಗಳ ವಿತರಣೆ:

ಇದೇ ವೇಳೆ ಶಾಸಕ ಆಸೀಫ್ ಸೇಠ ಜಿಲ್ಲೆಯ ವಿವಿಧ ಭಾಗಗಳಿಂದ ರಕ್ಷಣೆಗೊಂಡ ಬಾಲ ಕಾರ್ಮಿಕರಿಗೆ ಶಾಲಾ ಪಠ್ಯ ಪುಸ್ತಕಗಳನ್ನು ವಿತರಿಸಿದರು. ಬಳಿಕ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಮಕ್ಕಳ ರಕ್ಷಣೆ ಕುರಿತು ಪ್ರಮಾಣ ವಚನ ಸ್ವೀಕರಿಸಲಾಯಿತು.

ಸೈಬರ್ ಆರ್ಥಿಕ ಹಾಗೂ ಮಾದಕ ಅಪರಾಧಗಳ ಪೊಲೀಸ್ ಠಾಣಾಧಿಕಾರಿ ವೀರೇಶ ದೊಡ್ಡಮನಿ, ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ, ಜಿಲ್ಲಾ ಬಾಲ ಕಾರ್ಮಿಕರ ಯೋಜನೆ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೋಡ, ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ್ ಜೋಗುರು ಸೇರಿದಂತೆ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಸಿಬ್ಬಂದಿ, ವಿವಿಧ ಶಾಲೆಯ ಪಾಂಶುಪಾಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಾಲಕರು ದುಶ್ಚಟಗಳಿಗೆ ಬಲಿಯಾಗದಂತೆ ಶಿಕ್ಷಕರು, ಪಾಲಕರು ನಿರಂತರ ತಿಳಿಹೇಳಬೇಕು. ಮಕ್ಕಳು ಆಟ-ಪಾಠದಲ್ಲಿ ತೊಡಗಿಕೊಂಡು ಬೆಳೆದರೆ ಮಾತ್ರ ಭವಿಷ್ಯದಲ್ಲಿ ಉನ್ನತ ಪ್ರಜೆಯಾಗಲು ಸಾಧ್ಯ. ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ತಂದೆ-ತಾಯಿ, ಶಿಕ್ಷಕರು, ಕಾರ್ಮಿಕ ಇಲಾಖೆ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಬೆಳಗಾವಿ ಉತ್ತರ ಆಸೀಫ್ (ರಾಜು) ಸೇಠ ಹೇಳಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌