ಹಾನಗಲ್ಲ: ಮಾರುಕಟ್ಟೆಯಲ್ಲಿ ಸ್ಪರ್ಧೆ, ಸವಾಲು ಎದುರಿಸಿ, ಹೊಸತನ ಅಳವಡಿಸಿಕೊಂಡು ಆರ್ಥಿಕ ಸಂಕಷ್ಟದಿಂದ ಹಾಲು ಒಕ್ಕೂಟವನ್ನು ಹೊರತರಲು ನೂತನ ಆಡಳಿತ ಮಂಡಳಿ ಶ್ರಮ ವಹಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ಹಾವೇರಿ ಹಾಲು ಒಕ್ಕೂಟಕ್ಕೆ ಮಾರುಕಟ್ಟೆ ಇಲ್ಲದಂತಾಗಿದೆ. ಹಾಲಿನ ಗುಣಮಟ್ಟ ಕಡಿಮೆ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ನಷ್ಟವನ್ನು ಸರಿದೂಗಿಸುವ ಸವಾಲು ಸಹ ನಮ್ಮ ಮುಂದಿದೆ. ಒಕ್ಕೂಟ ಉಳಿದರೆ ಮಾತ್ರ ಹಾಲು ಉತ್ಪಾದಕರ ಹಿತ ಕಾಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಾಲಿನ ಗುಣಮಟ್ಟದ ಕಡೆಗೆ ಉತ್ಪಾದಕರು ಗಮನ ನೀಡಬೇಕಿದೆ ಎಂದರು.
ನಿರ್ದೇಶಕ ಚಂದ್ರಪ್ಪ ಜಾಲಗಾರ ಮಾತನಾಡಿ, ಹಾನಗಲ್ ತಾಲೂಕಿನಲ್ಲಿ ಪಶು ಆಹಾರ ಸಂಸ್ಕರಣ ಘಟಕ ನಿರ್ಮಾಣಕ್ಕೆ 30 ಎಕರೆ ಜಮೀನು ಮಂಜೂರಿ ಮಾಡಿಸಲು ಶಾಸಕ ಶ್ರೀನಿವಾಸ ಮಾನೆ ಕಾಳಜಿ ವಹಿಸಿದ್ದಾರೆ. ಹೈನೋದ್ಯಮಕ್ಕೆ ಪ್ರೋತ್ಸಾಹ ದೊರೆತರೆ ಬಡತನ ನಿರ್ಮೂಲನೆಯಾಗಲಿದೆ ಎಂದರು.ಒಕ್ಕೂಟದ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ನಿರ್ದೇಶಕರಾದ ಅಶೋಕ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಬಸವೇಶಗೌಡ ಪಾಟೀಲ, ಶಂಕರಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ. ಅಶೋಕಗೌಡ, ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ನಾರಾಯಣಪ್ಪ ಕಠಾರಿ, ಜೆ.ಸಿ. ಕುಲಕರ್ಣಿ, ಮಹದೇವಪ್ಪ ಮಾದಪ್ಪನವರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಎಸ್.ಜೆ. ಸುಣಗಾರ, ವೀರೇಶ ಬೈಲವಾಳ, ಭರಮಣ್ಣ ಶಿವೂರ, ಮೆಹಬೂಬಅಲಿ ಬ್ಯಾಡಗಿ, ಯಾಸೀರ್‌ಅರಾಫತ್ ಮಕಾನದಾರ, ಗೀತಾ ಪೂಜಾರ ಉಪಸ್ಥಿತರಿದ್ದರು.
ಬರೀ ಲಾಭದ ಕಡೆಗೆ ಗಮನ ನೀಡದೇ ಹಾಲು ಒಕ್ಕೂಟದ ಬಲವರ್ಧನೆಗೂ ಹಾಲು ಉತ್ಪಾದಕರು ಮುಂದಾಗಬೇಕಿದೆ. ಗುಣಮಟ್ಟದ ಹಾಲು ಉತ್ಪಾದಿಸಬೇಕಿದೆ. ಒಕ್ಕೂಟ ಸಹ ಹಾಲು ಉತ್ಪಾದಕರ ಹಿತದೃಷ್ಟಿ ಗಮನದಲ್ಲಿದ್ದುಕೊಂಡು ಪರಸ್ಪರ ಸಹಕಾರದೊಂದಿಗೆ ಹೆಜ್ಜೆ ಹಾಕಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.