ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಡತನಾಳು ಗ್ರಾಮದ ಮಂಟಿ ಬಡಾವಣೆ ನಿವಾಸಿಗಳು ಹಕ್ಕುಪತ್ರಗಳ ನೀಡುವಂತೆ ಒತ್ತಾಯಿಸಿ ತಾಲೂಕು ಪಂಚಾಯ್ತಿ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.ದರಸಗುಪ್ಪೆ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಡತನಾಳು ಗ್ರಾಮದ ಸರ್ಕಾರಿ ಸರ್ವೇ ನಂ 91ರಲ್ಲಿ ತಾಪಂ ಇಒ ಹೆಸರಿಗೆ ಖಾತೆ ಇದೆ. ಈ ಸ್ಥಳದಲ್ಲಿ ಕಳೆದ 20 ವರ್ಷಗಳಿಂದ ಮನೆಗಳ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ಈ ಮನೆಗಳಿಗೆ ಗ್ರಾಮ ಪಂಚಾಯ್ತಿಯಿಂದ ಬರುವ ಯಾವುದೇ ಸೌಲಭ್ಯಗಳನ್ನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆ ಕಟ್ಟಿಕೊಂಡು ವಾಸ ಮಾಡಿಕೊಂಡಿರುವ ನಮಗೆ ತಾಲೂಕು ಪಂಚಾಯ್ತಿಯಿಂದ ಹಕ್ಕು ಪತ್ರ ಜೊತೆಗೆ ಯಾವುದೇ ಸರ್ಕಾರಿ ಸೌಲತ್ತುಗಳು ಸಿಗದೆ ತೊಂದರೆ ಅನುಭವಿಸುತ್ತಿದ್ದೇವೆ. ಅಕ್ರಮ ಸಕ್ರಮದಲ್ಲಿ ವಿದ್ಯುತ್ ಸಂಪರ್ಕ ಮಾತ್ರ ಇದ್ದು, ನೀರಿನ ಸಂಪರ್ಕಗಳನ್ನು ಸಹ ಕಲ್ಪಿಸಿಲ್ಲ ಎಂದು ದೂರಿದರು.ಈ ಸರ್ವೇ ನಂ 91ರಲ್ಲಿ ಸುಮಾರು 7 ಎಕರೆ ಜಾಗವಿದ್ದು, 1996ರಲ್ಲಿ ಸುಮಾರು 30 ಹಕ್ಕಪತ್ರಗಳ ನೀಡಲಾಗಿದೆ. 2018ರಲ್ಲಿ 23 ಮಂದಿಗೆ ಮತ್ತೆ ಹಕ್ಕು ಪತ್ರ ನೀಡಿದೆ. ಇನ್ನು ಉಳಿದ ಯಾರಿಗೂ ಹಕ್ಕು ಪತ್ರ ನೀಡಿಲ್ಲ. ಸರ್ಕಾರ ಮಾತ್ರ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡುತ್ತಿದೆ ವಿನಹಃ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕೂಡಲೇ ಇಲ್ಲಿ ವಾಸಿಸುತ್ತಿರುವ ಮನೆಗಳಿಗೆ ಮೂಲ ಸಂಪರ್ಕದ ಜೊತೆ ಅಕ್ರಮ ಸಕ್ರಮದಲ್ಲಿ ಹಕ್ಕುಪತ್ರಗಳ ವಿತರಿಸಿ ಕುಟುಂಬಗಳ ಯಜಮಾನರ ಹೆಸರಿಗೆ ಖಾತೆಗಳ ಮಾಡಿಕೊಡಬೇಕು ಎಂದು ಒತ್ತಾಯಿಸಿ ತಾಪಂ ವ್ಯವಸ್ಥಾಪಕಿ ದಿವ್ಯಾ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಸಂದೇಶ್ ನೇತೃತ್ವದಲ್ಲಿ ಗ್ರಾಪಂ ಸದಸ್ಯರಾದ ಕೆ. ಸಜಯ್, ದ್ರಾಕ್ಷಾಯಿಣಿ, ಶಿವು, ಫಲಾನುಭವಿಗಳಾದ ಸಾಕವ್ವ, ಸುಮಿತ್ರ, ಮಂಜುಳಾ, ಪವಿತ್ರ, ಸುಧಾ, ಅನುಸೂಯ, ಗಾಯಿತ್ರಮ್ಮ, ಸುನಂದ, ಚರಣ್, ಮಾದೇಶ, ರಮೇಶ್, ಸ್ವಾಮಿ, ಅಭಿ ಸೇರಿದಂತೆ ಇತರರು ಇದ್ದರು.