ಗಜೇಂದ್ರಗಡ: ಯುವ ಸಮೂಹ ಗ್ರಾಮಗಳಲ್ಲಿ ನೈರ್ಮಲ್ಯ,ಆರೋಗ್ಯ ಹಾಗೂ ಶಿಕ್ಷಣದ ಪ್ರಾಮುಖ್ಯತೆ ಗ್ರಾಮಸ್ಥರಲ್ಲಿ ಮೂಡಿಸಲು ಶ್ರಮಿಸಿ ಗ್ರಾಮಗಳನ್ನು ಸ್ವಚ್ಛ ಹಾಗೂ ಸುಂದರ ಗ್ರಾಮಗಳಾಗಿ ನಿರ್ಮಿಸಲು ಶ್ರಮಿಸಬೇಕು ಎಂದು ತಾಪಂ ಎಂದು ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಿಂದ ಸಮೀಪದ ಕಾಲಕಾಲೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟಿಸಿ ಮಾತನಾಡಿದರು.ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳಾದ ಯುವ ಪೀಳಿಗೆ ಶಿಕ್ಷಣದೊಂದಿಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆ ಪಡೆದುಕೊಂಡು ಬದುಕಿಗೆ ಬೇಕಾದ ಮೌಲ್ಯಯುತ ಶಿಕ್ಷಣ ಪಡೆಯಲು ಎನ್‌ಎಸ್‌ಎಸ್ ಶಿಬಿರವು ಸಹಕಾರಿಯಾಗಿದೆ. ಕಾಲಕಾಲೇಶ್ವರ ಗ್ರಾಮವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಕಾಲಭೈರವನ ದೇವಸ್ಥಾನವು ದಕ್ಷಿಣಕಾಶಿ ಎಂದು ಪ್ರಸಿದ್ಧಿ ಪಡೆದಿದ್ದು, ಗ್ರಾಮದಲ್ಲಿನ ಪುಷ್ಕರಣಿ ಸೇರಿ ಅನೇಕ ಸುವರ್ಣಾಕ್ಷರಗಳಿಂದ ಬರೆದಿಟ್ಟ ಇತಿಹಾಸವಿದೆ. ಹೀಗಾಗಿ ಗ್ರಾಮದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು ನೈರ್ಮಲ್ಯ,ಆರೋಗ್ಯ ಹಾಗೂ ಶಿಕ್ಷಣದ ಪ್ರಾಮುಖ್ಯತೆ ಗ್ರಾಮಸ್ಥರಲ್ಲಿ ಮೂಡಿಸಲು ಶ್ರಮಿಸಿದಾಗ ಗ್ರಾಮಗಳು ಸ್ವಚ್ಛ ಹಾಗೂ ಸುಂದರ ಗ್ರಾಮಗಳನ್ನಾಗಿ ನಿರ್ಮಿಸಲು ಪ್ರಯತ್ನಿಸಬೇಕು.ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ನೈಜ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಪ್ರಾಚಾರ್ಯ ಜಿ.ಬಿ. ಗುಡಿಮನಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಸಾಮಾಜಿಕ ಸೇವಾಗುಣ, ನಾಯಕತ್ವ ಗುಣದ ಜತೆಗೆ ಸಹಬಾಳ್ವೆ ಮತ್ತು ಸಮುದಾಯ ಅಭಿವೃದ್ಧಿ ಸೇರಿ ಶ್ರಮದಾನದಂತಹ ಅನೇಕ ಮೌಲ್ಯ ಕಲಿಸಿಕೊಡಲು ಶಿಬಿರಗಳು ಸಹಕಾರಿ ಎಂದರು.ರಾಜೂರ ಗ್ರಾಪಂ ಸದಸ್ಯ ಮುತ್ತಣ್ಣ ತಳವಾರ, ಎಸ್‌ಡಿಎಂಸಿ ಅಧ್ಯಕ್ಷ ಕಳಕಪ್ಪ ತಳವಾರ, ಗ್ರಾಪಂ ಮಾಜಿ ಸದಸ್ಯ ಪರಶುರಾಮ ಚಿಲ್‌ಝರಿ, ಮೃತ್ಯುಂಜಯ ಹಿರೇಮಠ, ಶಿಬಿರಾಧಿಕಾರಿ ಎಸ್.ಎಸ್. ವಾಲಿಕಾರ, ಜ್ಯೋತಿ ಎಸ್ವಾ. ಗದಗ, ವೈ.ಆರ್.ಸಕ್ರೋಜಿ, ಎಸ್.ಎಂ. ಹುನಗುಂದ, ಪ್ರೇಮಾ ಚುಂಚಾ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದರು.