)
ಹುಬ್ಬಳ್ಳಿ:
ಧಾರವಾಡ ಜಿಪಂನ 28 ಕ್ಷೇತ್ರಗಳಿಗೆ ಕಳೆದ ಐದು ಅವಧಿ (2000 ರಿಂರ 2026) ನಡೆದ ಚುನಾವಣೆಗಳಲ್ಲಿ ನಿಗದಿ ಮಾಡುತ್ತ ಬಂದ ಮೀಸಲಾತಿಯ ಮೇಲೆ ಕಣ್ಣಾಡಿಸಿದರೆ, ಒಂದೇ ವರ್ಗಕ್ಕೆ ಮತ್ತೆ ಮತ್ತೆ ಮೀಸಲಾತಿ ಲಭಿಸಿದೆ. ಈ ಬಾರಿ ಮಹಿಳಾ ಮೀಸಲಾತಿ ಕಲ್ಪಿಸುವ ನೆಪದಲ್ಲಿ, ದಶಕಗಳಿಗೂ ಹೆಚ್ಚು ಕಾಲ ಆಯಾ ಕ್ಷೇತ್ರಗಳಲ್ಲಿ ಜನಸೇವೆ ಮಾಡುತ್ತ ಬಂದ ಎರಡನೇ ಸಾಲಿನ ನಾಯಕತ್ವಕ್ಕೆ ನಿರಾಸೆ ಮುಡಿಸಿರುವುದು ಈ ಕರಡು ಮೀಸಲಾತಿ ಪಟ್ಟಿಯಲ್ಲಿ ವೇದ್ಯವಾಗುತ್ತಿದೆ.
ಜಿಲ್ಲೆಯ ಕೆಲವು ಶಾಸಕರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಎರಡನೇ ಸಾಲಿನ ನಾಯಕತ್ವ ಮುನ್ನಲೆಗೆ ಬಾರದಂತೆ ತಡೆಯಲು ಮೀಸಲಾತಿಯಲ್ಲಿ ಹಸ್ತಕ್ಷೇಪ ಮಾಡಿ, ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಕಾಶ ಲಭಿಸದಂತೆ ಮಾಡಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ.ಕಳೆದ ಹಲವು ವರ್ಷಗಳಿಂದ ಆಯಾ ಜಿಪಂ ಕ್ಷೇತ್ರಗಳಲ್ಲಿ ದುಡಿಯುತ್ತ ಜನತೆಯ ಸಂಕಷ್ಟಕ್ಕೆ ಸ್ಪಂದಿಸುತ್ತ ಬಂದವರು ಈಗ ಈ ಕರಡು ಮೀಸಲಾತಿ ಪಟ್ಟಿಯನ್ನು ನೋಡಿ ತೀವ್ರ ನಿರಾಸೆಗೊಂಡಿದ್ದು, "ಈ ಜಿಪಂ ಚುನಾವಣೆಯಲ್ಲಿ ಗೆದ್ದು ಜನನಾಯಕರಾಗಿ ನಾವು ಬೆಳೆದರೆ, ಮುಂದೆ ಒಂದೂವರೆ ವರ್ಷದಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್‌ಗೆ ಮಗ್ಗಲು ಮುಳ್ಳಾಗುತ್ತೇವೆ ಎನ್ನುವ ಭಯದಿಂದ ನಮಗೆ ಮೀಸಲಾತಿ ತಪ್ಪಿಸಲಾಗಿದೆ " ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮೀಸಲಾತಿ ಅದ್ವಾನ:
ಅಣ್ಣಿಗೇರಿ ತಾಲೂಕಿನ ಶಲವಡಿ ಕ್ಷೇತ್ರದಲ್ಲಿ 3 ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲು ನೀಡಿದ್ದರೂ ಈಗ ಮತ್ತೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ನಿಗದಿ ಮಾಡಲಾಗಿದೆ. ಅದರಂತೆ ನಲವಡಿ ಕ್ಷೇತ್ರದಲ್ಲಿ ಎರಡು ಬಾರಿ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ನೀಡಿದ್ದರೂ ಈಗ ಮತ್ತೆ ಮಹಿಳಾ ಮೀಸಲಾತಿ ನೆಪದಲ್ಲಿ ಸಾಮಾನ್ಯ ವರ್ಗದ ಮಹಿಳೆಗೆ ನಿಗದಿಪಡಿಸಲಾಗಿದೆ.
ಧಾರವಾಡ ತಾಲೂಕಿನ ಗರಗ ಕ್ಷೇತ್ರದಲ್ಲಿ 2 ಬಾರಿ ಮಹಿಳೆಗೆ ನೀಡಿದ್ದರೂ ಈಗ ಮತ್ತೆ ಮಹಿಳಾ ಮೀಸಲಾತಿಗೆ ನಿಗದಿ ಮಾಡಲಾಗಿದೆ. ಉಪ್ಪಿನ ಬೆಟಗೇರಿ ಕ್ಷೇತ್ರದಲ್ಲಿ 3 ಬಾರಿ ಮಹಿಳೆಯರಿಗೆ ಅವಕಾಶ ನೀಡಿದ್ದರೂ ಈಗ ಮತ್ತೆ ಈ ಕ್ಷೆತ್ರವನ್ನು 4ನೇ ಬಾರಿ ಮಹಿಳಾ ಮೀಸಲಾತಿಗೆ ನಿಗದಿ ಮಾಡಲಾಗಿದೆ.
ಹೀಗೆ ಕೆಲವೇ ಕೆಲವು ವರ್ಗಗಳು ಮೀಸಲಾತಿ ಲಾಭ ಪಡೆದಿವೆ. ಇದೀಗ ಮಹಿಳಾ ಮೀಸಲಾತಿ ನೆಪದಲ್ಲಿ ಹಿಂದೆ ಅವಕಾಶ ಪಡೆದ ವರ್ಗಗಳಿಗೆ ಮತ್ತೆ ಮಹಿಳಾ ಮೀಸಲು ಹೆಸರಿನಲ್ಲಿ ರಾಜಕೀಯ ಲಾಭ ಕಲ್ಪಿಸಿರುವುದು ಇನ್ನುಳಿದ ವರ್ಗಗಳಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದ್ದು, ಅವರೆಲ್ಲ ಸೂಕ್ತ ದಾಖಲೆಗಳೊಂದಿಗೆ ಈ ಕರಡು ಮೀಸಲು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.ಕೋನರಡ್ಡಿ ವಿರುದ್ಧ ಆಕ್ರೋಶ:
ಹಾಲಿ ಶಾಸಕ ಕಾಂಗ್ರೆಸ್ಸಿನ ಎನ್.ಎಚ್.ಕೋನರಡ್ಡಿ ಅವರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಮತ್ತು ತಮ್ಮ ಪುತ್ರನಿಗೆ ರಾಜಕೀಯ ಆಶ್ರಯ ಕಲ್ಪಿಸಲು ಈಗಿನಿಂದಲೇ ಹೊಸ ನಾಯಕತ್ವ ಬರದಂತೆ ತಡೆಯಲು ತಮ್ಮಿಷ್ಟದಂತೆ ಮೀಸಲಾತಿ ನಿಗದಿ ಮಾಡಿಸುತ್ತಿದ್ದಾರೆ ಎನ್ನುವುದು ಅಲ್ಲಿನ ಆಕಾಂಕ್ಷಿಗಳ ಆಕ್ರೋಶ.
ಪ್ರದೀಪ ಲೆಂಕನಗೌಡರ್, ಜಿಪಂ ಆಕಾಂಕ್ಷಿ