ಶಿರಸಿ: ನಗರದ ಟಿಎಸ್ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 58(e) ರ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತವಾಯಿತು.
ಸಭೆಯಲ್ಲಿ ಟಿಎಸ್ಎಸ್ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಈ ಆದೇಶವು ದೋಷಪೂರಿತವಾಗಿದ್ದು, ಸಹಕಾರ ಸಂಘಗಳ ಮೂಲತತ್ವಕ್ಕೆ, ವ್ಯವಹಾರ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ ಮತ್ತು ಧಕ್ಕೆ ತರುವಂತದ್ದಾಗಿದೆ. ಪತ್ತು ಮತ್ತು ಮಾರಾಟ ಜೋಡಣೆ ವ್ಯವಸ್ಥೆಯಲ್ಲಿ ಪ್ಯಾಕ್ಸ್, ಮಾರಾಟ ಸಂಘಗಳು ಮತ್ತು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳು ಅವಿನಾಭಾವ ಸಂಬಂಧ ಹೊಂದಿದೆ. ಉತ್ತಮ ವ್ಯವಹಾರ ನಿರ್ವಹಿಸುತ್ತ ಬಂದಿರುತ್ತದೆ. ಇದೇ ಪರಿಕಲ್ಪನೆ ಮತ್ತು ವ್ಯವಸ್ಥೆಯಲ್ಲಿ ಮುಂದುವರಿಯುವ ಅನಿವಾರತೆಯಿದೆ. ಈ ಕುರಿತು ಯಾವುದೇ ಸಹಕಾರ ಸಂಘಗಳು ಭಯ ಪಡುವ ಅಗತ್ಯವಿಲ್ಲ ಎಂದರು.ಸಹಕಾರ ಇಲಾಖೆಯವರು ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಮತ್ತು ಸಹಕಾರಿ ಕಾಯಿದೆಯಲ್ಲಿರುವ ಇನ್ನಿತರ ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಸಹಕಾರ ಇಲಾಖೆಯ ನಿರ್ದೇಶನದಂತೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಹೊರಡಿಸಿದ ಈ ಆದೇಶದ ವಿರುದ್ಧ ಸಹಕಾರ ಇಲಾಖೆಗೆ ಮನವರಿಕೆ ಮಾಡಿಕೊಡುವುದು ಅಥವಾ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯ ಎಂದರು.
ನ್ಯಾಯವಾದಿ ಅರುಣಾಚಲ ಹೆಗಡೆ ಮಾತನಾಡಿ, ಸಹಕಾರ ಸಂಘಗಳ ಕಾಯಿದೆ 1959ರ 2(ಎ) 28(ಎ) ಮತ್ತು 58ರ ತಿದ್ದುಪಡಿ ಆದೇಶಗಳಿಗೆ ಕೋರ್ಟ ತಡೆಯಾಜ್ಞೆ ಇದೆ. ಈ ತಿದ್ದುಪಡಿಯು ಸಹಕಾರ ಸಂಘಗಳ ಕಾಯಿದೆಯಲ್ಲಿ ಉಲ್ಲೇಖಿಸಲಾದ ಪ್ರಮುಖ ಕಲಂ ಮತ್ತು ಸಹಕಾರಿಗಳಲ್ಲಿ ಸಹಕಾರ ಮನೋಭಾವ ತತ್ವಗಳಿಗೆ ವ್ಯತಿರಿಕ್ತವಾಗಿದೆ ಎಂದರು.ಟಿಎಂಎಸ್ ಶಿರಸಿ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ, ಸಹಕಾರ ಇಲಾಖೆಯ ಮಾಜಿ ಲೆಕ್ಕಪರಿಶೋಧಕ ರಾಮಪ್ಪ, ವಾನಳ್ಳಿ ಸೊಸೈಟಿ ಅಧ್ಯಕ್ಷ ಎಂ.ಎ. ಹೆಗಡೆ ಹಾಗೂ ಮಾರಾಟ ಮತ್ತು ಪ್ರಾಥಮಿಕ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು, ನಿರ್ದೇಶಕರು, ಟಿಎಸ್ಎಸ್ ಉಪಾಧ್ಯಕ್ಷರು, ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಮಾತನಾಡಿದರು.