ಕನ್ನಡಪ್ರಭ ವಾರ್ತೆ ಯಲ್ಲಾಪುರರಾಜ್ಯದ ಮನಮೋಹಕ ಜಲಪಾತಗಳಲ್ಲಿ ಒಂದಾದ ತಾಲೂಕಿನ ಸಾತೊಡ್ಡಿ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿಷೇಧ ಹೇರಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಹೀಗಿರುವಾಗ ಜಿಲ್ಲಾಡಳಿತ ನಿಷೇಧ ಹೇರಿರುವುದು ಪ್ರವಾಸಿಗರಲ್ಲಿ ನಿರಾಸೆ ಉಂಟು ಮಾಡಿದ್ದರೆ, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹೋರಾಟ ಮಾಡುವವರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ.
ಈ ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಿಗೆ ಇರುವುದರಿಂದ ಪ್ರವಾಸಿಗರಿಗೆ ಜಲಪಾತ ಪ್ರವೇಶ ನಿಷೇಧಿಸಲಾಗಿದೆ ಎನ್ನುವ ದೊಡ್ಡದೊಂದು ಬ್ಯಾನರ್ ಸಾತೊಡ್ಡಿ ಜಲಪಾತದ ಪ್ರವೇಶ ರಸ್ತೆಯಲ್ಲಿ ರಾರಾಜಿಸುತ್ತಿದೆ. ಅದರ ಬಳಿಯೇ ಅರಣ್ಯ ಸಿಬ್ಬಂದಿ ಕಾವಲು ನಿಂತಿರುತ್ತಾರೆ. ಪ್ರವಾಸಿಗರೂ ಸೇರಿದಂತೆ ಸ್ಥಳೀಯರನ್ನೂ ಜಲಪಾತದ ಬಳಿ ಬಿಡುತ್ತಿಲ್ಲ.ಜಲಪಾತಗಳಿಗೆ ಮಳೆಗಾಲದಲ್ಲಿ ಪ್ರವಾಸಿಗರಿಗೆ ನಿಷೇಧ ನಾಮಫಲಕ. ಇದು ಯಾವ ನ್ಯಾಯ ? ಜಲಪಾತಗಳನ್ನು ಮಳೆಗಾಲದಲ್ಲಿ ವೀಕ್ಷಿಸದೇ ಬೇಸಿಗೆಯಲ್ಲಿ ನೀಡಬೇಕೇ ? ಎಂಬ ಸಾಮಾನ್ಯ ಅರಿವು ನಮ್ಮ ಅಧಿಕಾರಿಗಳಿಗೆ ಇಲ್ಲವೇ ? ಅಧಿಕಾರಿಗಳ ಬಳಿ ''''ಯಾಕೆ ನಿಷೇಧಿಸುತ್ತಿದ್ದೀರಿ'''' ಎಂದರೆ ''''ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಾರೆ'''' ಎನ್ನುವ ಉತ್ತರ ಸಿದ್ಧವಾಗಿರುತ್ತದೆ.ಎಲ್ಲ ಜಲಪಾತಗಳೂ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲೇ ಇವೆ. ಸಾವಿರಾರು ಏಕರೆ ಅರಣ್ಯ ಜಾಗಕ್ಕೆ ತಂತಿ ಬೇಲಿ ಹಾಕಲಾಗುತ್ತದೆ. ಜಲಪಾತಗಳ ಬಳಿ ತಂತಿ ಬೇಲಿ ನಿರ್ಮಿಸಿದರೆ ಜನ ದೂರದಿಂದ ವೀಕ್ಷಿಸಿ ಮರಳುತ್ತಾರೆ. ಇದನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಬೇರೆ ಜಲಪಾತ ಮತ್ತು ಯಾಣದ ಬಳಿ ಇದೇ ಜಿಲ್ಲಾಧಿಕಾರಿಗಳು ಪ್ರವಾಸಿಗರನ್ನು ಸ್ವಾಗತಿಸುವ ಬ್ಯಾನರ್ ಹಾಕಿದ್ದಾರೆ. ಜಿಲ್ಲಾಧಿಕಾರಿಗಳ ಈ ದ್ವಂದ್ವ ನಿಲುವಿಗೆ ತಾಲೂಕಿನ ಜನತೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕಾರವಾರ ಜಿಲ್ಲಾ ಕೇಂದ್ರವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸೋದ್ಯಮಕ್ಕೆ ಮಹತ್ವ ನೀಡಲಿಲ್ಲ. ದಾಂಡೇಲಿಯನ್ನು ಅಲ್ಪ ಸ್ವಲ್ಪ ಬೆಳೆಸಲಾಗಿದೆ. ಬಿಟ್ಟರೆ ಯಲ್ಲಾಪುರ, ಶಿರಸಿ, ಹಳಿಯಾಳ, ಮುಂಡಗೋಡು, ಸಿದ್ದಾಪುರ, ಅಂಕೋಲಾ, ಕುಮಟಾ ಈ ತಾಲೂಕುಗಳು ತೀರಾ ಹಿಂದೆ ಬಿದ್ದಿವೆ. ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂಬುದು ಜನರ ಆಗ್ರಹವಾಗಿದೆ.