ಕೇಂದ್ರ ಸರ್ಕಾರ ವಿರುದ್ಧ ಡಾ.ಪ್ರಭಾ ನೇತೃತ್ವದಲ್ಲಿ ಹೋರಾಟ

KannadaprabhaNewsNetwork |  
Published : May 19, 2026, 01:30 AM IST
18ಕೆಡಿವಿಜಿ5-ದಾವಣಗೆರೆಯಲ್ಲಿ ಸೋಮವಾರ ಕೇಂದ್ರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು. .....................18ಕೆಡಿವಿಜಿ6-ದಾವಣಗೆರೆಯಲ್ಲಿ ಸೋಮವಾರ ಕೇಂದ್ರದ ವಿರುದ್ಧ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ದಿನೇಶ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದ್ದನ್ನು ಖಂಡಿಸಿ, ನೀಟ್‌-2026 ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಗರದ ಶ್ರೀ ಜಯದೇವ ವೃತ್ತದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್‌ನಿಂದ ಕೇಂದ್ರದ ವಿರುದ್ಧ ಸಿಲಿಂಡರ್ ಪೋಸ್ಟರ್ ಹಿಡಿದು ಪ್ರತಿಭಟನಾ ಧರಣಿ ನಡೆಸಲಾಯಿತು. ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

- ತೈಲ, ಅನಿಲ ಬೆಲೆ ಗಗನಕ್ಕೆ, ನೀಟ್‌ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಒಳ್ಳೆಯ ದಿನಗಳಾ? । ಪ್ರಧಾನಿ ರಾಜೀನಾಮೆ ಕಾಂಗ್ರೆಸ್ ಆಗ್ರಹ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದ್ದನ್ನು ಖಂಡಿಸಿ, ನೀಟ್‌-2026 ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಗರದ ಶ್ರೀ ಜಯದೇವ ವೃತ್ತದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್‌ನಿಂದ ಕೇಂದ್ರದ ವಿರುದ್ಧ ಸಿಲಿಂಡರ್ ಪೋಸ್ಟರ್ ಹಿಡಿದು ಪ್ರತಿಭಟನಾ ಧರಣಿ ನಡೆಸಲಾಯಿತು. ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ವಾಣಿಜ್ಯ ಸಿಲಿಂಡರ್ ಹಾಗೂ ಎಲ್‌ಪಿಜಿ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನೀಟ್ ಪರೀಕ್ಷೆ ಅಕ್ರಮ ಮತ್ತು ಪತ್ರಿಕೆ ಸೋರಿಕೆ ತಡೆಯಲು ಸಾಧ್ಯವಾಗಿಲ್ಲ. ಇದೇ ನರೇಂದ್ರ ಮೋದಿಯವರ ಒಳ್ಳೆಯ ದಿನಗಳಾ ಎಂದು ಪ್ರಶ್ನಿಸಿದರು.

ದೇಶಾದ್ಯಂತ 23 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ರಾಜ್ಯದಲ್ಲಿ 1.5 ಲಕ್ಷದಷ್ಟು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತೆಗೆದುಕೊಂಡಿದ್ದಾರೆ. ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆಯ ಹಿಂದೆ ಉತ್ತರ ಭಾರತದಲ್ಲಿ ದೊಡ್ಡ ಮಾಫಿಯಾವೇ ಕೆಲಸ ಮಾಡುತ್ತಿದೆ. ಕಳೆದ 7 ವರ್ಷಗಳಲ್ಲಿ 72 ಬಾರಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಇದೇ ಮೋದಿ ಆಡಳಿತದ ಟ್ರ್ಯಾಕ್ ರೆಕಾರ್ಡ್. ಇದೇ ಅಚ್ಚೇ ದಿನ್‌ಗಳಾ ಎಂಬುದಾಗಿ ದೇಶ ವಾಸಿಗಳು ಕೇಳುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾ ವಿರುದ್ಧ ಕೇಂದ್ರವು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಹೇಳಿದರು.

ನೀಟ್ ಪರೀಕ್ಷೆ ತೆಗೆದುಕೊಂಡು ಹಗಲಿರುಳು ಕಷ್ಟಪಟ್ಟು ಮಧ್ಯಮ ವರ್ಗದ, ಬಡವರ ಮಕ್ಕಳು ಓದಿರುತ್ತಾರೆ. ಕೆಲವರು ಜಮೀನು ಮಾರಾಟ ಮಾಡಿ ಮಕ್ಕಳನ್ನು ಓದಿಸಿದರೆ, ಮತ್ತೆ ಕೆಲವರು ತಾಳಿ, ಬಂಗಾರ ಅಡವಿಟ್ಟು ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಪಾಲಕರು ಕಳಿಸುತ್ತಾರೆ. ನೀಟ್ ಪರೀಕ್ಷೆ ರದ್ದು ಮಾಡಿದ್ದರಿಂದ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ? ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಾವು ಇಲಾಖೆ ಅಧಿಕಾರ ವಹಿಸಿಕೊಂಡು ಕೆಲ ತಿಂಗಳಾಗಿವೆಯೆಂಬ ಉಡಾಫೆ ಮಾತನಾಡಿದ್ದಾರೆ. ನೀಟ್ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದರು.

ಈ ಹಿಂದೆ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ತೆರಿಗೆ ಎಷ್ಟಿತ್ತು? ಮೋದಿ ಪ್ರಧಾನಿಯಾದ ಬಳಿಕ ಎಷ್ಟಾಗಿದೆ? ಜನರ ಮೇಲೆ ವಿಧಿಸುತ್ತಿರುವ ತೆರಿಗೆ ಎಷ್ಟು ಎಂಬ ಬಗ್ಗೆ ಕೇಂದ್ರ ಮಾಹಿತಿ ನೀಡಲಿ. ತೈಲ ಕಂಪನಿಗಳನ್ನು ರಿಲೈಯನ್ಸ್, ಶೆಲ್ ನಂತಹ ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಪೆಟ್ರೋಲ್ 1 ಲೀಟರ್‌ಗೆ ₹100 ಗಡಿ ದಾಟಿದ್ದರೆ, ಡೀಸೆಲ್ ದರ ₹90 ಆಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರೊಂದಕ್ಕೆ ₹3 ಸಾವಿರಗಳಿಗೆ ಏರಿಕೆಯಾಗಿದೆ. ಕಳೆದ 11 ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಇದೇನಾ ಎಂದು ಸಂಸದೆ ಪ್ರಶ್ನಿಸಿದರು.

ಸಿಎನ್‌ಜಿ ದರ ಏರಿಕೆ ಆಗಿದ್ದರಿಂದ ಆಟೋ ಚಾಲಕರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಫೆಬ್ರವರಿಯಲ್ಲಿ ಮಧ್ಯಪ್ರಾಚ್ಯದ ಯುದ್ಧ ಶುರುವಾಗಿದೆ. ಆದರೆ, ಎರಡೂವರೆ ತಿಂಗಳ ಬಳಿಕ ಬೆಲೆ ಏರಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ತೈಲ ದರ, ಗ್ಯಾಸ್ ದರ ಹೆಚ್ಚಿಸಲಾಗಿದೆ. ಇದೇನಾ ಮೋದಿ ಆಡಳಿತ ವೈಖರಿ? ಬಡವರು, ದೀನ ದಲಿತರು, ಶೋಷಿತರ ಪರ ಯೋಜನೆ ನೀಡುವುದು ಕಾಂಗ್ರೆಸ್ ಸರ್ಕಾರ. ಹಣದುಬ್ಬರವೂ ಜಾಸ್ತಿಯಾಗಿದೆ. ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ದೇಶದ ಜನತೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ, ಬಯಲುಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ತೈಲ ಬೆಲೆ ಏರಿಕೆ, ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ತಡೆಯುವಲ್ಲಿ ವಿಫಲವಾದ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶದ ಜನರಿಗೆ ಒಳ್ಳೆಯ ದಿನಗಳನ್ನು ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ದುರ್ದಿನಗಳನ್ನು ತರುತ್ತಿದ್ದಾರೆ. ಇನ್ನಾದರೂ ದೇಶವಾಸಿಗಳು ಬಿಜೆಪಿಯ ಜನವಿರೋಧಿ ನೀತಿ, ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಬ್ಲಾಕ್ ಅಧ್ಯಕ್ಷರಾದ ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಶ್ರೀಕಾಂತ ಬಗರೆ, ಎಸ್.ಕೆ.ಪ್ರವೀಣ ಯಾದವ್, ಮುಜಾಹಿದ್‌ ಪಾಷಾ, ಕವಿತಾ ಚಂದ್ರಶೇಖರ, ಸುಧಾ ಇಟ್ಟಿಗುಡಿ, ಸರ್ವಮಂಗಳ, ಕಾವ್ಯ, ವರುಣ್ ಬೆಣ್ಣೆಹಳ್ಳಿ ಇತರರು ಇದ್ದರು.

- - -

-18ಕೆಡಿವಿಜಿ5: ದಾವಣಗೆರೆಯಲ್ಲಿ ಸೋಮವಾರ ಕೇಂದ್ರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ದಿನೇಶ ಶೆಟ್ಟಿ ಮತ್ತಿತರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್‌ಡಿಡಿ ಹೆಸರಲ್ಲಿ ಬೇಲೂರು ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ ಸಂಭ್ರಮ