ಸೋಮರಡ್ಡಿ ಅಳವಂಡಿ ಕೊಪ್ಪಳ
ಹೌದು, ಪ್ರಮಾಣಪತ್ರ ನೀಡಬೇಕಾದವರು ತೋರುತ್ತಿರುವ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದಿಂದ ವಿದ್ಯಾರ್ಥಿಗಳಿಗೆ ಬಂದಿರುವ ಅವಕಾಶವೇ ಕೈ ತಪ್ಪುವಂತಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಪಡೆಯುವುದು ದೊಡ್ಡ ಸಮಸ್ಯೆಯಾಗಿದ್ದು, ಅಧಿಕಾರಿಗಳು ಸ್ಪಂದನೆ ಮಾಡದೇ ಇರುವುದು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ.
ರದ್ದು ಮಾಡಲು ತಿಂಗಳು ಬೇಕಂತೆ: ವಿದ್ಯಾರ್ಥಿಯಾಗಿದ್ದಾಗ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆದಿದ್ದ ಯುವತಿಯರು ಈಗ ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಸರ್ಕಾರದ ನೇಮಕಾತಿ ನಿಯಮದ ಪ್ರಕಾರ ಪತಿಯ ಮನೆಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ, ಪತಿಯ ಮನೆಯಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಈ ಮೊದಲು ವಿದ್ಯಾರ್ಥಿಯಾಗಿದ್ದಾಗ ಪಡೆದಿದ್ದ ಜಾತಿ ಮತ್ತು ಆದಾಯ ಪ್ರಮಾಣಪತ್ರ ರದ್ದು ಮಾಡಿಕೊಳ್ಳಬೇಕು. ಹೀಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರದ್ದು ಮಾಡಲು ಅರ್ಜಿ ಸಲ್ಲಿಸಿದರೆ ಅದು ರದ್ದಾಗಲು ಒಂದು ತಿಂಗಳು ಬೇಕಂತೆ. ರದ್ದಾದ ಮೇಲೆ ಪತಿಯ ಮನೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಲು ಹೋದರೆ ಕೊನೆಯ ದಿನಾಂಕವೇ ಮುಗಿದು ಹೋಗಿರುತ್ತದೆ.ಇದ್ಯಾವ ಕಾನೂನು: ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ದಾಖಲೆ ಪರಿಶೀಲನೆಗೆ ಸಮಯವಕಾಶ ತೆಗೆದುಕೊಳ್ಳಲಿ, ರದ್ದು ಮಾಡುವುದಕ್ಕೆ ತಿಂಗಳು ಬೇಕು ಎನ್ನುವುದೇ ಈಗಿರುವ ದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
ಜಿಲ್ಲಾಧಿಕಾರಿಗಳೇ ಇತ್ತ ಗಮನ ಕೊಡಿ: ಹತ್ತಾರು ವರ್ಷಗಳ ಬಳಿಕ ಅವಕಾಶ ಬಂದಿದ್ದು, ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಐದಾರು ದಿನಗಳೊಳಗಾಗಿ ಜಾತಿ, ಆದಾಯ ಮತ್ತು 371 ಜೆ ಪ್ರಮಾಣಪತ್ರ ನೀಡುವಂತೆ ಆಗಬೇಕು. ನೇಮಕಾತಿ ಪ್ರಕ್ರಿಯೇ ನಡೆದಿರುವ ಹಿನ್ನೆಲೆ ಅಧಿಕಾರಿಗಳು ಅರ್ಜಿ ಆಯಾ ದಿನವೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ತವರು ಮನೆಯಲ್ಲಿ ಪಡೆದಿದ್ದ 371ಜೆ ಪ್ರಮಾಣಪತ್ರ ಇದ್ದರೂ ಮದುವೆಯಾಗಿರುವುದರಿಂದ ಪತಿಯ ಮನೆಯ ಪ್ರಮಾಣಪತ್ರ ಬೇಕಂತೆ. ಅದಕ್ಕಾಗಿ ಮೊದಲು ಪತಿಯ ಹೆಸರಿನಲ್ಲಿ 371 ಜೆ ಪ್ರಮಾಣಪತ್ರ ಪಡೆದ ನಂತರ ನಾನು ಪಡೆಯಬೇಕಂತೆ. ಇದೆಲ್ಲವೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಸಾಧ್ಯವೇ ಇಲ್ಲ ಎಂದು ಸರೋಜಾ ಕಾತರಕಿ ತಿಳಿಸಿದ್ದಾರೆ.