ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿಠಲ್ ಗಣಾಚಾರಿ ಎಚ್ಚರಿಕೆಮುಂಡರಗಿ: ಭೀಕರವಾದ ಬರಗಾಲದಿಂದ ರೈತರ ಬೆಳೆಗಳು ಒಣಗಿ ಹೋಗಿವೆ. ಸಿಂಗಟಾಲೂರು ಏತನೀರಾವರಿ ಯೋಜನೆ ಅಡಿಯಲ್ಲಿ ಬರುವ ಜಲವಾಡಗಿ ಏತ ನೀರಾವರಿ ಯೋಜನೆಯನ್ನು ಸರ್ಕಾರ ಶೀಘ್ರವಾಗಿ ಪ್ರಾರಂಭಿಸಬೇಕು. ಅಲ್ಲದೇ ಈ ಭಾಗದ ಜನರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನೂ ಸಹ ಶೀಘ್ರವಾಗಿ ಮುಕ್ತಾಯಗೊಳಿಸುವ ಮೂಲಕ ಈ ಭಾಗದ ರೈತರಿಗೆ ನೀರಾವರಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿಠಲ್ ಗಣಾಚಾರಿ ಒತ್ತಾಯಿಸಿದ್ದಾರೆ.ಅವರು ಮಂಗಳವಾರ ಮುಂಡರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಭಾಗದಲ್ಲಿನ ಎಲ್ಲ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಾಲವಾಡಗಿ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದೆ. ಈ ಯೋಜನೆಯ ವ್ಯಾಪ್ತಿಗೆ ಮುಂಡರಗಿ, ಶಿರಹಟ್ಟಿ ಹಾಗೂ ಗದಗ ತಾಲೂಕಿನ 31 ಕೆರೆಗಳನ್ನು ತುಂಬಿಸಲಿದ್ದು, ಸರ್ಕಾರ ಶೀಘ್ರವಾಗಿ ಈ ಯೋಜನೆಯನ್ನು ಮಂಜೂರುಗೊಳಿಸಿ ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಮುಂಡರಗಿ ತಾಲೂಕಿನ ಬಹುತೇಕ ಗ್ರಾಮಗಳಿಗೆ ಹನಿ ನೀರಾವರಿ ಮೂಲಕ ನೀರಾವರಿ ಮಾಡುತ್ತಿದ್ದು, ಇದರಿಂದ ರೈತರ ಬೆಳೆಗಳಿಗೆ ಸರಿಯಾಗಿ ನೀರು ದೊರೆಯುವುದಿಲ್ಲ. ಹೀಗಾಗಿ ಉತ್ತಮವಾದ ಬೆಳೆ ಬೆಳೆಯಲು ಅನುಕೂಲವಾಗುವುದಿಲ್ಲ. ಆದ್ದರಿಂದ ಅವನ್ನು ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರು ಕೊಡುವಂತಾಗಬೇಕು. ಸರ್ಕಾರ ಈ ಬಗ್ಗೆ ಬೆಳಗಾವಿಯಲ್ಲಿ ಜರುಗುತ್ತಿರುವ ಅಧಿವೇಶನದಲ್ಲಿ ಚರ್ಚಿಸಬೇಕು. ಒಂದು ವೇಳೆ ಈ ಕಾಮಗಾರಿ ತ್ವರಿತವಾಗಿ ಆಗದೇ ಇದ್ದಲ್ಲಿ ಯೋಜನೆ ವ್ಯಾಪ್ತಿಯ ರೈತರೊಂದಿಗೆ ಸೇರಿಕೊಂಡು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೀಗ ಭೀಕರವಾದ ಬರಗಾಲ ಆವರಿಸಿದ್ದು, ಬ್ಯಾಂಕಿನವರು ರೈತರ ಸಾಲ ವಸೂಲಾತಿಗಾಗಿ ಒತ್ತಾಯಿಸಿ ನೋಟಿಸ್ ನೀಡುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ರೈತರ ಸಾಲ ವಸೂಲಾತಿಗಾಗಿ ನೋಟಿಸ್ ನೀಡದಂತೆ ಹಾಗೂ ವಸೂಲಾತಿಗೆ ಒತ್ತಾಯಿಸದಂತೆ ತಕ್ಷಣವೇ ಬ್ಯಾಂಕಿನ ಅಧಿಕಾರಿಗಳ ಸೂಚನೆ ನೀಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸೋಮಪ್ಪ ಕೊಡ್ಲಿ, ಸಿದ್ದೇಶ್ವರಪ್ಪ ತಳವಾರ, ಹನಮಪ್ಪ ಪೂಜಾರ, ಈಶ್ವರಪ್ಪ ಮರಿಶೆಟ್ಟಿ, ನಾಗರಾಜ ಹೆಸರೂರು, ಎ.ಎಂ. ಮುಲ್ಲಾ, ಅಬ್ದುಲ್ ಗಪಾರ್, ವಿರೂಪಾಕ್ಷಪ್ಪ ಬಡಿಗೇರ ಉಪಸ್ಥಿತರಿದ್ದರು.