ಈರಣ್ಣ ಬುಡ್ಡಾಗೋಳ
ಕನ್ನಡಪ್ರಭ ವಾರ್ತೆ ರಾಮದುರ್ಗಲೋಕಾಪುರ- ರಾಮದುರ್ಗ- ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದ ಬಹುದಿನಗಳ ಬೇಡಿಕೆಗೆ ಹೋರಾಟ ತೀವ್ರತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಮದುರ್ಗದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ.
ರಾಷ್ರ್ಟೀಯ ಹೆದ್ದಾರಿ, ಸುಗಮ ದಾರಿಗಳ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಈ ಭಾಗದ ಜನ ಸುಮಾರು 30 ವರ್ಷಗಳಿಂದಲೂ ಬಾಗಲಕೋಟೆಯಿಂದ ಧಾರವಾಡ ಮಾರ್ಗಕ್ಕಾಗಿ ಬೇಡಿಕೆ ಇಟ್ಟಿದ್ದರು. ಈಗ ಬಾಗಲಕೋಟೆ ಕುಡಚಿ ಮಾರ್ಗ ಲೋಕಾಪೂರಕ್ಕೆ ಬಂದು ತಲುಪಿದ ನಂತರ ಈ ಬೇಡಿಕೆ ಮತ್ತಷ್ಟು ತೀವ್ರತೆ ಪಡೆದಿದೆ.ಬಾಗಲಕೋಟೆ ಕುಡಚಿ ಹೋರಾಟದಲ್ಲಿ ಯಶಸ್ಸು ಕಂಡಿರುವ ಕುತುಬುದ್ದೀನ್ ಖಾಜಿ, ಮತ್ತಿತರ ಮಾರ್ಗದರ್ಶನದಲ್ಲಿ ಹೋರಾಟದ ರೂಪುರೇಷೆಗಳು ಸಿದ್ಧವಾಗಿವೆ. ಲೋಕಾಪುರದಿಂದ ಧಾರವಾಡಕ್ಕೆ ಹೋಗುವ ಹೊಸ ರೈಲು ಮಾರ್ಗದ ಹೋರಾಟಕ್ಕೆ ರಾಮದುರ್ಗ ತಾಲೂಕಿನ ಎಲ್ಲ ಪಕ್ಷಗಳ ಪ್ರಮುಖರು, ಸಂಘ-ಸಂಸ್ಥೆಗಳ ನಾಯಕರು ಬೆಂಬಲಿಸಿ ನ.12 ರಂದು ಬೃಹತ್ ಹೋರಾಟಕ್ಕೆ ಅಣಿಯಾಗಿದ್ದಾರೆ.
ಧಾರ್ಮಿಕ, ವಾಣಿಜ್ಯ ಸೇರಿ ಎಲ್ಲ ಕ್ಷೇತ್ರಗಳು ಪ್ರಗತಿ:ಲೋಕಾಪುರದವರೆಗೆ ಬಂದಿರುವ ರೈಲ್ವೆ ಮಾರ್ಗ ರಾಮದುರ್ಗ, ಸವದತ್ತಿ ತಾಲೂಕಿನ ಶಿರಸಂಗಿ, ಸವದತ್ತಿ ಮೂಲಕ ಧಾರವಾಡ ಸಂಪರ್ಕಿಸಿದರೇ ರಾಮದುರ್ಗ ತಾಲೂಕಿನಲ್ಲಿರುವ ಐತಿಹಾಸಿಕ ಮತ್ತು ಪೌರಾಣಿಕ ಧಾರ್ಮಿಕ ಕ್ಷೇತ್ರಗಳ ಜತೆಗೆ ವಾಣಿಜ್ಯ ಕ್ಷೇತ್ರ ಸಹಿತ ಪ್ರಗತಿ ಹೊಂದಲಿದೆ ಎಂಬ ನಿರೀಕ್ಷೆ ಕೂಡ ಇದೆ.
ಶ್ರೀರಾಮಚಂದ್ರನ ಪರಮ ಭಕ್ತೆ ಶಬರಿದೇವಿ ಕ್ಷೇತ್ರ ಸುರೇಬಾನದ ಶಬರಿಕೊಳ್ಳ ಇಲ್ಲಿದೆ. ಶಬರಿ ಮಾತೆಯ ದರ್ಶನಕ್ಕೆ ಬರುವ ಉತ್ತರ ಭಾರತದ ಪ್ರವಾಸಿಗರಿಗೆ ಇದು ಅನುಕೂಲ. ಜೊತೆಗೆ ಐತಿಹಾಸಿಕ ಕ್ಷೇತ್ರ ಗೋಡಚಿ ವೀರಭದ್ರೇಶ್ವರ ಮತ್ತು ಸವದತ್ತಿಯ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ಬರುವ ಮಹಾರಾಷ್ಟ್ರ, ಆಂಧ್ರ ಪ್ರದೇಶದ ಭಕ್ತರಿಗೂ ಇದು ಸಹಕಾರಿಯಾಗಲಿದೆ. ಮುಳ್ಳೂರ ಗುಡ್ಡದಲ್ಲಿ ನಿರ್ಮಾಣವಾಗಿರುವ ಬೃಹದಾಕಾರದ ಶಿವನಮೂರ್ತಿ ಮತ್ತು ನಂದಿ ವಿಗ್ರಹದ ದರ್ಶನದಂತಹ ಪ್ರವಾಸಿ ತಾಣಗಳಿವೆ. ಹೀಗಾಗಿ ಲೋಕಾಪುರ, ರಾಮದುರ್ಗ, ಧಾರವಾಡ ರೈಲ್ವೆ ಸಂಪರ್ಕ ಕಲ್ಪಿಸಲು ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಸಂಸದರು ಪ್ರಯತ್ನ ಪಡಬೇಕಿದೆ.ವ್ಯವಸ್ಥಿತ ಸಾರಿಗೆ ಇಲ್ಲದೆ ರಾಮದುರ್ಗ ತಾಲೂಕು ಕೈಗಾರಿಕೆ, ವಾಣಿಜ್ಯ ಕ್ಷೇತ್ರದಲ್ಲಿ ಹಿಂದುಳಿದಿದೆ. ಈಗಾಗಲೇ ರಾಮದುರ್ಗ ತಾಲೂಕಿನಲ್ಲಿ ಸಹಕಾರಿ ಕ್ಷೇತ್ರದ ಒಂದು ಖಾಸಗಿ ಕ್ಷೇತ್ರದ ಒಂದು ಸಕ್ಕರೆ ಕಾರ್ಖಾನೆ ಆರಂಭವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬೇಡಿಕೆ ಮಾರ್ಗ ಸಾಕಾರಗೊಂಡರೆ, ಎಲ್ಲ ರಂಗಗಳಲ್ಲಿ ರಾಮದುರ್ಗ ಅಭಿವೃದ್ಧಿ ಹೊಂದಲಿದೆ ಎನ್ನುವುದು ಇಲ್ಲಿನವರ ಆಶಾವಾದ.
ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳಲ್ಲಿರುವ ಧಾರ್ಮಿಕ ಕ್ಷೇತ್ರದ ಜತೆಗೆ ವಿವಿಧ ರಂಗಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ರಾಮದುರ್ಗದ ರೈಲು ಹೋರಾಟ ಸಮಿತಿಗೆ ರಾಜಕಾರಣಿಗಳ, ಧರ್ಮಗುರುಗಳು ಮತ್ತು ಸಾರ್ವಜನಿಕರು ಹೋರಾಟ ಆರಂಭಿಸಿದ್ದಾರೆ. ಕೇಂದ್ರದಲ್ಲಿ ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರ ಮೇಲೆ ಒತ್ತಡ ಹಾಕಿ ಈ ಬೇಡಿಕೆ ಈಡೇರಿಕೆಗೆ ಅಣಿಯಾಗಬೇಕಿದೆ.ಹೋರಾಟಕ್ಕಿದೆ 44 ವರ್ಷಗಳ ಇತಿಹಾಸ:
1980ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಹನಮಂತಪ್ಪ ಮುನವಳ್ಳಿ ಈ ರೈಲ್ವೆ ಸಂಪರ್ಕ ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದ್ದರು. 2016ರಲ್ಲಿ ಸಾಮಾಜಿಕ ಕಾರ್ಯಕರ್ತ ಗುರುಸಿದ್ದಪ್ಪ ತೊಗ್ಗಿ ಹೋರಾಟ ಆರಂಭಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಬಾಗಲಕೋಟೆಯ ಕುತುಬುದ್ದೀನ್ ಖಾಜಿ ಅವರು ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗಕ್ಕೆ ಹೋರಾಟ ಆರಂಭಿಸಿದಾಗ ರಾಮದುರ್ಗದ ಬಸೀರಹ್ಮದ್ ಬೈರೆಕದಾರ ಕೂಡ ಹೋರಾಟ ಆರಂಭಿಸಿದ್ದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಕೂಡ ಕೇಂದ್ರದಲ್ಲಿ ಸದಾನಂದಗೌಡರು, ಸುರೇಶಪ್ರಭು ಅವರಿಗೆ ಮನವಿ ಸಲ್ಲಿಸಿದ ಪರಿಣಾಮ ಲೋಕಾಪುರ ಧಾರವಾಡ ರೈಲ್ವೆ ಮಾರ್ಗದ ಕ್ರಿಯಾ ಯೋಜನೆ ಮತ್ತು ಸರ್ವೇ ಕಾರ್ಯಕ್ಕೆ ಕೇಂದ್ರ ಸರ್ಕಾರ ಒಪ್ಪಿತ್ತು. ಈಗ ಮತ್ತೆ ರಾಮದುರ್ಗ ತಾಲೂಕು ರೈಲ್ವೆ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಇದಕ್ಕೆ ತಾಲೂಕಿನ ಮಠಾಧೀಶರ, ಪಕ್ಷಾತೀತವಾಗಿ ರಾಜಕಾರಣಿಗಳು, ವಿವಿಧ ಸಂಘಟನೆಗಳು, ವ್ಯಾಪಾರಸ್ಥರು ಬೆಂಬಲ ನೀಡಿರುವುದು ಹೋರಾಟಕ್ಕೆ ಆನೆಬಲ ಬಂದಂತಾಗಿದೆ.ಲೋಕಾಪುರ, ರಾಮದುರ್ಗ, ಧಾರವಾಡ ರೈಲ್ವೆ ಸಂಪರ್ಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಅಗತ್ಯವಿದ್ದು ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಈ ವಿಷಯವನ್ನು ಕೇಂದ್ರದ ರೈಲ್ವೆ ಖಾತೆ ಸಚಿವರಾದ ವಿ.ಸೋಮಣ್ಣನವರೊಂದಿಗೆ ಮತ್ತು ಸಂಸದ ಜಗದೀಶ ಶೆಟ್ಟರ ಜೊತೆ ಮಾತನಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಿ ಹೋರಾಟಕ್ಕೆ ವೇಗ ನೀಡುತ್ತೇನೆ.
-ಅಶೋಕ ಮ.ಪಟ್ಟಣ, ಶಾಸಕರು, ಸರ್ಕಾರದ ಮುಖ್ಯಸಚೇತಕರು.ಸುರೇಬಾನದ ಶಬರಿಕೊಳ್ಳ ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರದಷ್ಟೇ ಐತಿಹಾಸಿಕವಾಗಿದೆ. ಇಂತಹ ಪ್ರವಾಸಿ ತಾಣಕ್ಕೆ ಉತ್ತರ ಭಾರತದ ಪ್ರವಾಸಿಗರ ಅನುಕೂಲಕ್ಕಾಗಿ ರೈಲು ಮಾರ್ಗ ಅತ್ಯವಶ್ಯಕ. ಗೋಡಚಿ ವೀರಭದ್ರೇಶ್ವರ, ಶಿರಸಂಗಿ ಕಾಳಮ್ಮ ಹಾಗೂ ಸವದತ್ತಿ ರೇಣುಕಾ ಯಲ್ಲಮ್ಮಾ ದೇವಿಯ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯಲು ವಿವಿಧ ರಾಜ್ಯಗಳ ಭಕ್ತರಿಗೆ ಅನುಕೂಲ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ತಾಲೂಕಿನ ಅಭಿವೃದ್ಧಿ ಹೆಚ್ಚು ಆಗಲಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮಾರ್ಗದ ಬಹುದಿನದ ಬೇಡಿಕೆ ಈಡೇರಿಕೆಗೆ ಪಕ್ಷಾತೀತವಾಗಿ ಹೋರಾಟ ಮಾಡೋಣ.-ಡಾ.ಕೆ.ವಿ.ಪಾಟೀಲ, ಅಧ್ಯಕ್ಷರು, ಬಿಜೆಪಿ ಮಂಡಲ ರಾಮದುರ್ಗ.ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಸದಾನಂದಗೌಡರು, ಸುರೇಶಪ್ರಭು ಅವರಿಗೆ ಮಹಾದೇವಪ್ಪ ಯಾದವಾಡರು ಪ್ರಯತ್ನಿಸಿ ಸರ್ವೇ ಕಾರ್ಯಕ್ಕೆ ಒಪ್ಪಿಗೆ ಪಡೆದಿದ್ದರು. ನಂತರ ತಾಲೂಕಿನ ಜನರ ಇಚ್ಛಾಶಕ್ತಿ ಕೊರತೆಯ ಪರಿಣಾಮ ನೆನಗುದಿಗೆ ಬಿದ್ದ ರೈಲ್ವೆ ಹೋರಾಟ ಮತ್ತೇ ಜೀವ ಪಡೆದಿದೆ.
-ಮಲ್ಲಣ್ಣ ಯಾದವಾಡ, ಅಧ್ಯಕ್ಷರು ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ರಾಮದುರ್ಗ.ಐತಿಹಾಸಿಕ ಹಿನ್ನೆಲೆಯುಳ್ಳ ರಾಮದುರ್ಗ, ಕೈಗಾರಿಕೆ, ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸ್ಥಾನ ಪಡೆಯಲು ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಕೈಗೆ ಉದ್ಯೋಗಕ್ಕೆ ಲೋಕಾಪುರ, ಧಾರವಾಡ ರೈಲ್ವೆ ಮಾರ್ಗ ಅಗತ್ಯವಾಗಿದೆ. ಒಗ್ಗಟ್ಟಿನಿಂದ ರಾಮದುರ್ಗದ ಜನತೆ ಹೋರಾಟಕ್ಕೆ ಧುಮುಕಿದ್ದು ನಿರಂತರವಾಗಿ ಮುಂದುವರೆಯಬೇಕಾಗಿದೆ.-ಡಾ.ಬಿ.ಎಲ್.ಸಂಕನಗೌಡ್ರ, ಅಧ್ಯಕ್ಷರು ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ ರಾಮದುರ್ಗ