ಕನ್ನಡಪ್ರಭ ವಾರ್ತೆ ಭದ್ರಾವತಿ
ರಾಜ್ಯದಲ್ಲಿ ಪಡಿತರ ವಿತರಣೆ ಹಾಗೂ ಪಡಿತರ ವಿತರಕರಿಗೆ ಸಂಬಂಧಿಸಿದ ಲೋಪದೋಷಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಎಚ್ಚರಿಸಿದರು.ಅವರು ಭಾನುವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪಡಿತರ ವಿತರಕರು ಇ-ಕೆವೈಸಿ ಮಾಡಿಸಿರುವ ಬಾಕಿ ಹಣ ಕಳೆದ ೬ ವರ್ಷಗಳಿಂದ ರಾಜ್ಯ ಸರ್ಕಾರ ನೀಡಿಲ್ಲ. ಪ್ರಸ್ತುತ ರಾಜ್ಯದಲ್ಲಿ ಪಡಿತರದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ೫ ಕೆ.ಜಿ. ಅಕ್ಕಿಯನ್ನು ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಸರ್ಕಾರ ೫ ಕೆ.ಜಿ ಉಚಿತ ಅಕ್ಕಿ ಬದಲು ರು. ೧೭೦ ಪಡಿತರದಾರ ರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದೆ. ಆದರೆ ಈ ಹಣ ಸಹ ಸರಿಯಾಗಿ ಜಮಾ ಆಗುತ್ತಿಲ್ಲ ಎಂದು ಆರೋಪಿಸಿದರು.
ದೇಶದ ಇತರೆ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ನೀಡುತ್ತಿರುವ ಕಮಿಷನ್ ಹಣ ರಾಜ್ಯದ ಪಡಿತರ ವಿತರಕರಿಗೂ ನೀಡಬೇಕು. ರಾಜ್ಯ ಸರ್ಕಾರ ೧೭೦ ರು. ಹಣ ಜಮಾ ಮಾಡುವ ಬದಲು ಈ ದರಕ್ಕೆ ಅಗತ್ಯವಿರುವ ಇತರೆ ಆಹಾರ ಪದಾರ್ಥಗಳನ್ನು ನೀಡಬೇಕು. ಉಳಿದಂತೆ ರಾಜ್ಯದಲ್ಲಿ ಸೀಮೆ ಎಣ್ಣೆ ಅಭಾವ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಅಗತ್ಯ ವಿರುವಷ್ಟು ಪ್ರಮಾಣದ ಸೀಮೆ ಎಣ್ಣೆ ಪೂರೈಕೆ ಮಾಡಬೇಕು. ರಾಜ್ಯದ ಆಹಾರ ಇಲಾಖೆ ಗೋದಾಮುಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಕೆಳಹಂತದ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಗೋದಾಮುಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಹಾಗೂ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.ಒಟ್ಟಾರೆ ರಾಜ್ಯದಲ್ಲಿ ಪಡಿತರ ವಿತರಣೆ ಹಾಗೂ ಪಡಿತರ ವಿತರಕರಿಗೆ ಸಂಬಂಧಿಸಿದ ಲೋಪದೋಷಗಳನ್ನು ಮುಂದಿನ ೧ ತಿಂಗಳ ಒಳಗಾಗಿ ಸರಿಪಡಿಸದಿದ್ದಲ್ಲಿ ರಾಜ್ಯದಾ ದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಚನ್ನಕೇಶವಗೌಡ, ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ಜಿಲ್ಲಾಧ್ಯಕ್ಷ ಲೋಕೇಶಪ್ಪ, ಜಯಣ್ಣ, ಮುರುಗೇಶ್, ರುದ್ರಮುನಿ, ಜವರಾಯಿ, ಎ.ಬಿ.ರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.