ಈಡಿಗ ಸಮುದಾಯದ ಅಭಿವೃದ್ಧಿಗೆ ಹೋರಾಟ ಅನಿವಾರ್ಯ

KannadaprabhaNewsNetwork |  
Published : Nov 10, 2025, 01:45 AM IST
9ುಲು4 | Kannada Prabha

ಸಾರಾಂಶ

ಹೋರಾಟದ ಫಲದಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಸಮಾಜಕ್ಕೆ ನಿಗಮ ಸ್ಥಾಪನೆ

ಗಂಗಾವತಿ: ಈಡಿಗ ಸಮುದಾಯದ ಅಭಿವೃದ್ಧಿಗೆ ಹೋರಾಟ ಅನಿವಾರ್ಯವಾಗಿದ್ದು, ಸಮುದಾಯದ ಬೇಡಿಕೆಗಳಿಗಾಗಿ 700 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ತಾಪುರ ಕರದಾಳ ಬ್ರಹ್ಮಶ್ರೀನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.

ನಗರದ ಸರ್ವೇಶ ಸಭಾಂಗಣದಲ್ಲಿ ಹೋರಾಟದ ಕುರಿತು ಈಡಿಗ ಸಮುದಾಯದಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಹೋರಾಟದ ಫಲದಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಸಮಾಜಕ್ಕೆ ನಿಗಮ ಸ್ಥಾಪನೆಯಾಗಿದ್ದು, ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ನಿಟ್ಟಿನಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅನುದಾನ ದೊರೆತಿತ್ತು. ಆದರೆ ಪ್ರಸ್ತುತ ಸಿಎಂ ಸಿದ್ದರಾಮಯ್ಯ ಸರ್ಕಾರ ನಿಗಮಕ್ಕೆ ಅನುದಾನ ನೀಡಿಲ್ಲ, ಅಧ್ಯಯನ ಮುಂದುವರಿಸಿಲ್ಲ.ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಸಮಾಜಕ್ಕೆ ಯಾವುದೇ ಲಾಭವಾಗಿಲ್ಲ. ಸಮುದಾಯ ಎಸ್ಟಿಗೆ ಸೇರ್ಪಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಚಿತ್ತಾಪುರ ಕರದಾಳ ಶಕ್ತಿಪೀಠದಿಂದ ಬೆಂಗಳೂರುವರಿಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಈಡಿಗ ಮಹಾಮಂಡಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ26 ಪಂಗಡಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.ನಿಗಮಕ್ಕೆ ₹500 ಕೋಟಿ ಅನುದಾನ, ಕುಲಕಸಬು ಕಳೆದುಕೊಂಡ (ಹೆಂಡ ಮಾರಾಟ) ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ಥ ಈಡಿಗರಿಗೆ 5 ಎಕರೆ ಭೂಮಿ ವಿತರಣೆ, ಮದ್ಯ ಮಾರಾಟ ಪರವಾನಗಿಯಲ್ಲಿ ಈಡಿಗ ಸಮುದಾಯದ 26 ಪಂಗಡಗಳಿಗೆ ಶೇ. 50ಮೀಸಲು ಸೇರಿ 18 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.

ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಮಾತನಾಡಿ, ಈಡಿಗ ಸಮುದಾಯ ಅತ್ಯಂತ ಬಡ ಸಮಾಜವಾಗಿದ್ದು, ಕುಲಕಸಬು ಕಿತ್ತಿಕೊಂಡ ನಂತರ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಶ್ರೀಗಳ ಹೋರಾಟದ ಫಲದಿಂದ ಸಮುದಾಯ ಮುನ್ನೆಲೆಗೆ ಬರುತ್ತಿದ್ದು, 700 ಕಿಮೀ ಪಾದಯಾತ್ರೆ 41 ದಿನಗಳವರಿಗೂ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಸಂಪರ್ಕಿಸುವ ಗ್ರಾಮಗಳಲ್ಲಿ ಜಾಗೃತಿ ಸಭೆಯೊಂದಿಗೆ ಹೋರಾಟದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಆರ್ಯ ಈಡಿಗ ಸಂಘ ಸೇರಿದಂತೆ ಸಮುದಾಯದ ಹಲವು ಸಂಘಟನೆಗಳು ನೆರವಾಗಿದ್ದು. ಜ.6 ರಿಂದ ಚಿತ್ತಾಪುರದ ಶಕ್ತಿಪೀಠದಿಂದ ಆರಂಭವಾಗಲಿದೆ ಎಂದರು.

ಈ ವೇಳೆ ಆರ್ಯ ಈಡಿಗ ಸಂಘದ ರಾಜ್ಯಾಧ್ಯಕ್ಷ ಸಿ. ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಕಾಶೀನಾಥ ಬಿಚ್ಚಾಲಿ, ಪದಾಧಿಕಾರಿ ರಾಧಾ ಉಮೇಶ, ರಾಜಪ್ಪ, ಭುವನೇಶಪ್ಪ, ತಿರುಮಲೇಶ ಇತರರಿದ್ದರು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್