ರೈತ ಭಾರತ ಪಕ್ಷದ ಹೋರಾಟ ಅಂತ್ಯ

KannadaprabhaNewsNetwork |  
Published : Nov 06, 2026, 03:00 AM IST
ವಿಜಯಪುರ | Kannada Prabha

ಸಾರಾಂಶ

ನಗರದ ಹೆಸ್ಕಾಂ ವಿಭಾಗೀಯ ಕಚೇರಿಯ ಆವರಣದಲ್ಲಿ ವಿದ್ಯುತ್‌ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಕಳೆದ ಸೋಮವಾರದಿಂದ ರೈತ ಭಾರತ ಪಕ್ಷವು ನಡೆಸುತ್ತಿದ್ದ ಅನಿರ್ದಿಷ್ಟ ಹೋರಾಟ ಸ್ಥಳಕ್ಕೆ ಗುರುವಾರ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪಕ್ಷದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಹೋರಾಟಕ್ಕೆ ತಾತ್ಕಾಲಿಕವಾಗಿ ಅಂತ್ಯವಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಹೆಸ್ಕಾಂ ವಿಭಾಗೀಯ ಕಚೇರಿಯ ಆವರಣದಲ್ಲಿ ವಿದ್ಯುತ್‌ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಕಳೆದ ಸೋಮವಾರದಿಂದ ರೈತ ಭಾರತ ಪಕ್ಷವು ನಡೆಸುತ್ತಿದ್ದ ಅನಿರ್ದಿಷ್ಟ ಹೋರಾಟ ಸ್ಥಳಕ್ಕೆ ಗುರುವಾರ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪಕ್ಷದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಹೋರಾಟಕ್ಕೆ ತಾತ್ಕಾಲಿಕವಾಗಿ ಅಂತ್ಯವಾಯಿತು.

ಅನಿರ್ದಿಷ್ಟ ಹೋರಾಟದ ಕುರಿತಂತೆ ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರನ್ನು ನ.12 ರಂದು ಭೇಟಿ ನೀಡಲು ಹೆಸ್ಕಾಂ ಅಧಿಕಾರಿಗಳು ಮುಕ್ತವಾಗಿ ಆಹ್ವಾನಿಸಿ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದರಿಂದ ಹೋರಾಟ ಹಿಂಪಡೆಯಲಾಯಿತು. ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಪಾಟೀಲ, ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ, ಪಿಎಸೈ ಸಂಕ ಅವರು ಹೋರಾಟ ಸ್ಥಳಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಶಿವಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸ್ಕಾಂ ಗ್ರಾಮೀಣ ಉಪವಿಭಾಗವನ್ನು ಮೊದಲಿನ ಜಾಗಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೇ ಅಧೀಕ್ಷಕ ಅಭಿಯಂತರ ಕಚೇರಿಗೆ ಸ್ಥಳಾಂತರ ಮಾಡಬೇಕು. ವಿಜಯಪುರ ನಗರದಲ್ಲಿ ಭೂಗತ ಕೇಬಲ್ ವಿದ್ಯುತ್ ಸಂಪರ್ಕ ಅಳವಡಿಸಬೇಕು ಎಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ಈ ಬಾರಿ ತುಂಬಾ ಬರಗಾಲವಿದ್ದು, ರೈತರು ತುಂಬಾ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ರೈತರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ದಂಡ ಕಟ್ಟುವ ₹15 ಸಾವಿರ ಹಣವನ್ನು ಶೂನ್ಯಕ್ಕೆ ಇಳಿಸಬೇಕು, ರೈತರ ಟ್ರಾನ್ಸಫಾರ್ಮರ್ ಅಳವಡಿಕೆಗಾಗಿ ಇರುವ ಫೀ ಈಗಾಗಲೇ ಹೆಚ್ಚಿಸಿದ್ದು, ಅದನ್ನು ಕೂಡಲೇ ₹3,100ಕ್ಕೆ ಇಳಿಸಬೇಕು. ಗುಂಟಾ ಮನೆಗಳಿಗೆ, ರೈತರ ತೋಟದ ಮನೆಗಳಿಗೆ ವಿದ್ಯುತ್‌ ಹೊಸ ಸಂಪರ್ಕ ಕಲ್ಪಿಸಲು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹೆಸ್ಕಾಂ ವಿಭಾಗಿಯ ಕಚೇರಿಯವರಿಗೆ ಪಾದಯಾತ್ರೆ ನಡೆಸಿ ಹೆಸ್ಕಾಂ ವಿಭಾಗೀಯ ಕಚೇರಿಯ ಆವರಣದಲ್ಲಿ ಸೋಮವಾರದಿಂದ ಅನಿರ್ದಿಷ್ಟ ಹೋರಾಟವನ್ನು ರೈತ ಭಾರತ ಪಕ್ಷ ನಡೆಸಿತ್ತು. ಹೆಸ್ಕಾಂ ಎಂಡಿ, ಜಿಎಂ ತಾಂತ್ರಿಕ, ಜಿಎಂ ಅಡ್ಮಿನ್, ಆರ್ಥಿಕ ಸಲಹೆಗಾರರು, ಅಧೀಕ್ಷಕ ಅಭಿಯಂತರರು ಹೆಸ್ಕಾಂ ಆರ್‌ಎಪಿಡಿಆರ್‌ಪಿ ಮತ್ತು ಮುಖ್ಯ ವಿದ್ಯುತ್‌ ಪರಿವೀಕ್ಷಕರು ಬರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಗುರುವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿತ್ತು. ಹೋರಾಟಕ್ಕೆ ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಬೆಂಬಲ ಸೂಚಿಸಿದ್ದರು.ಈ ಸಂದರ್ಭದಲ್ಲಿ ರಕ್ಷಣಾ ಸ್ವಾಭಿಮಾನಿಗಳ ವೇದಿಕೆ ಅಧ್ಯಕ್ಷ ಜಗದೇವ ಸೂರ್ಯವಂಶಿ, ಇಸ್ಮಾಯಿಲ್‌ ಸುತಾರ, ಅಲ್ತಾಪ್‌ ಮನಿಹಾರ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಸಮಿತಿಯ ಅಶೋಕ್ ವಾಲಿಕರ್, ಬಸವರಾಜ ಕುರುವಿನಶೆಟ್ಟಿ, ಮಲ್ಲು ಯಾಳವಾರ, ಮಹೇಶ ಬಡಿಗೇರ, ಇರ್ಫಾನ್‌ ಗುಲಬುರ್ಗ, ಸೌಮ್ಯಾ ನಾರಾಯಣಕರ್‌ ಸೇರಿದಂತೆ ಮುಖಂಡರು ಇದ್ದರು.ಜನರಿಗೆ ಅನುಕೂಲ ಕಲ್ಪಿಸಲು ಜಾರಿಗೆ ತಂದ ಗೃಹಜ್ಯೋತಿ ಯೋಜನೆಯು ಸದ್ಯ ಬಡ ಜನರಿಗೆ ಸೇರಿದಂತೆ ಸರ್ವರಿಗೂ ಆರ್ಥಿಕ ಹೊರೆಯಾಗುತ್ತಿದೆ. 200 ಯೂನಿಟ್‌ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿ ಸರಾಸರಿ ಆಧಾರ ಮೇಲೆ ಯೂನಿಟ್ ನೀಡುತ್ತಿದೆ. ಪ್ರತಿವರ್ಷವೂ ಬಳಕೆಗೆ ಅನುಗುಣವಾಗಿ ಶೇ.10 ರಷ್ಟು ಯೂನಿಟ್‌ ಹೆಚ್ಚಿಸುವುದಾಗಿ ಹೇಳಿರುವ ಸರ್ಕಾರ ಇಲ್ಲಿಯವರೆಗೆ ಪರಿಷ್ಕರಣೆ ಮಾಡಿಯೇ ಇಲ್ಲ. ಇದರ ವಿರುದ್ಧ ಸಾರ್ವಜನಿಕರು ಹೋರಾಟ ಮಾಡಬೇಕು ಅಂದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು.

-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತ ಮುಖಂಡರ ಬಂಧನಕ್ಕೆ ಜಿಲ್ಲೆಯಲ್ಲಿ ಆಕ್ರೋಶ
ಬರದಲ್ಲಿ ರೈತರಿಗೆ ಆಸರೆಯಾದ ಕೆರೆಯ ನೀರು!