ಬಸರಿಕಟ್ಟಿ ಹಾಗೂ ಕಡಿವಾಲ ಕಲ್ಲಾಪುರ ಗ್ರಾಮಗಳ ಮಧ್ಯೆಯಿರುವ ಅಂದಾಜು 110 ಎಕರೆ ವಿಸ್ತೀರ್ಣ ಹೊಂದಿರುವ ಬೃಹತ್ ಕೆರೆಯನ್ನು 5 ಕೋಟಿಯಲ್ಲಿ ಸುಧಾರಣೆ ಮಾಡಿ ನೀರು ಸಂಗ್ರಹವಾಗಿದ್ದರಿಂದ ಬರಗಾಲದಲ್ಲಿ ರೈತರು ಜೋಳ, ಕಡಲೆಯಂತಹ ಬೆಳೆ ಬೆಳೆಯಲು ಅನುಕೂಲವಾಗಿದೆ.

ಅಶೋಕ.ಕೆ.ಸಿಂಗದ

ಕನ್ನಡಪ್ರಭ ವಾರ್ತೆ ಕಮತಗಿ

ಬಸರಿಕಟ್ಟಿ ಹಾಗೂ ಕಡಿವಾಲ ಕಲ್ಲಾಪುರ ಗ್ರಾಮಗಳ ಮಧ್ಯೆಯಿರುವ ಅಂದಾಜು 110 ಎಕರೆ ವಿಸ್ತೀರ್ಣ ಹೊಂದಿರುವ ಬೃಹತ್ ಕೆರೆಯನ್ನು ₹5 ಕೋಟಿಯಲ್ಲಿ ಸುಧಾರಣೆ ಮಾಡಿ ನೀರು ಸಂಗ್ರಹವಾಗಿದ್ದರಿಂದ ಬರಗಾಲದಲ್ಲಿ ರೈತರು ಜೋಳ, ಕಡಲೆಯಂತಹ ಬೆಳೆ ಬೆಳೆಯಲು ಅನುಕೂಲವಾಗಿದೆ.ಬಸರಿಕಟ್ಟಿ ಹಾಗೂ ಕಡಿವಾಲ ಕಲ್ಲಾಪುರ ಗ್ರಾಮಗಳ ಜಮೀನಿನ ಮಧ್ಯೆ ಅಂದಾಜು 110 ಎಕರೆ ವಿಸ್ತೀರ್ಣವನ್ನು ಹೊಂದಿದ್ದ ಬೃಹತ್ ಕೆರೆಯ ತಡೆಗೋಡೆ ನೀರಿನ ರಭಸಕ್ಕೆ ಒಡೆದು ಹೋಗಿತ್ತು. ಹೀಗಾಗಿ ಕೆರೆಯಲ್ಲಿ ನೀರು ಸಂಗ್ರಹ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಬಸರಿಕಟ್ಟಿ ಹಾಗೂ ಕಡಿವಾಲ ಕಲ್ಲಾಪುರ, ಕಮತಗಿ, ಬೈರಮಟ್ಟಿ ಗ್ರಾಮಗಳ ಜಮೀನುಗಳ ರೈತರು ಬಹಳ ವರ್ಷಗಳಿಂದ ಕೆರೆ ಸುಧಾರಣೆ ಮಾಡಿ ನೀರು ಸಂಗ್ರಹ ಮಾಡಿ ರೈತರಿಗೆ ಅನಕೂಲ ಮಾಡಿಕೊಡಬೇಕೆಂದು ಹಲವು ವರ್ಷಗಳಿಂದ ಒತ್ತಾಯ ಮಾಡಿದ ಪರಿಣಾಮ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರು 2024-25ನೇ ಸಾಲಿನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಅಂದಾಜು ₹5ಕೋಟಿ ಅನುದಾನ ಬಿಡಗಡೆಗೊಳಿಸಿ ಕೆರೆಯ ಸುಧಾರಣೆಯ ಕಾಮಗಾರಿಗೆ ಚಾಲನೆ ನೀಡಿದ್ದರು. ಕೆರೆಗೆ 2ಕಿಮಿವರೆಗಿನ ತಡಗೋಡೆಯ ಕಾಮಗಾರಿಯ ಕೆಲಸವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಮೂಲಕ ನೀರು ಸಂಗ್ರಹ ಸಾಧ್ಯವಾಯಿತು.

ಕೆರೆಯಲ್ಲಿ ಕಾಲುವೆ ನೀರು ಸಂಗ್ರಹ : ಪ್ರತಿ ವರ್ಷ ಮಳೆಯಾದಾಗ ಬೆನಕಟ್ಟಿ, ಭಗವತಿ, ಬೈರಮಟ್ಟಿ ಗ್ರಾಮಗಳ ಭಾಗದಿಂದ ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿತ್ತು. ಆದರೆ ಕೆರೆಗೆ ತಡಗೋಡೆ ಇಲ್ಲದ ಪರಿಣಾಮ ನೀರು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವರ್ಷ ಕೆರೆಗೆ ತಡಗೋಡೆ ನಿರ್ಮಿಸಿದ್ದರೂ ಮುಂಗಾರು ಕೈಕೊಟ್ಟಿದ್ದರಿಂದ ಕೆರೆಗೆ ಮಳೆ ನೀರು ಬಂದಿರಲಿಲ್ಲ. ಆದರೆ ಆಲಮಟ್ಟಿ ಜಲಾಶಯದ ಮೂಲಕ ಕಾಲುವೆಗಳಿಗೆ ಬಿಟ್ಟ ನೀರು ಹೆಚ್ಚಾಗಿ ಕೆರೆಗೆ ಹರಿದು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿತ್ತು.

ಬರದಿಂದ ಕಂಗಾಲಾಗಿದ್ದ ಕೆರೆಯ ಸುತ್ತ ಮುತ್ತಲಿನ ಜಮೀನುಗಳ ರೈತರು ಪಂಪಸೆಟ್‌ಗಳ ಮೂಲಕ ಜಮೀನುಗಳಿಗೆ ಕೆರೆಯ ನೀರನ್ನು ಹಾಯಿಸಿ ಜೋಳ, ಕಡಲೆ ಮುಂತಾದ ಬೆಳೆ ಬೆಳೆದಿದ್ದಾರೆ. ಇತರೆಡೆ ಮಳೆ ಇಲ್ಲದೆ ಜಮೀನುಗಳು ಪಾಳು ಬಿದ್ದಿದ್ದರೆ ಈ ಕೆರೆಯ ಸುತ್ತಲಿನ ಜಮೀನುಗಳಲ್ಲಿ ಬೆಳೆ ನಳನಳಿಸುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಬರಗಾಲದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಅನುಕೂಲ ಆಗಿದೆ.

ಕೆರೆಗೆ ನೀರು ಹರಿಸಿದ ಎಚ್.ವೈ. ಮೇಟಿ : ಬಸರಿಕಟ್ಟಿ ಹಾಗೂ ಕಡಿವಾಲ, ಕಲ್ಲಾಪುರ ಗ್ರಾಮಗಳ ಮಧ್ಯೆ ಇದ್ದ ಬೃಹತ್ ಕೆರೆಗೆ ತಡೆಗೋಡೆ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುವುದರಿಂದ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಕೆರೆಯ ಸುತ್ತ ಮುತ್ತಲಿನ ಸಾವಿರಾರು ಎಕರೆ ಜಮಿನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಅಂತರ್ಜಲಮಟ್ಟ ಹೆಚ್ಚಾಗಲು ಸಹಾಯಕವಾಗಿದೆ. ಕೆರೆಯ ಅಭಿವೃದ್ಧಿಗೆ ಶ್ರಮಿಸಿದ ಶಾಸಕ ಎಚ್‌.ವೈ. ಮೇಟಿ ಅವರ ಕಾರ್ಯವನ್ನು ಸುತ್ತಮುತ್ತಲಿನ ರೈತರು ಕೊಂಡಾಡುತ್ತಿದ್ದಾರೆ.

ಕೆರೆಯ ಇನ್ನಷ್ಟು ಕೆಲಸ ಆಗಬೇಕಿದೆ : ಕೆರೆಗೆ ತಡಗೋಡೆಯನ್ನು ನಿರ್ಮಿಸಿ ನೀರು ಸಂಗ್ರಹ ಮಾಡಲಾಗಿದ್ದು, ಆದರೆ ತಡಗೋಡೆಯ ಎಡ ಹಾಗೂ ಬಲಬದಿ ಪಿಚ್ಚಿಂಗ್ ಕೆಲಸ ಆಗಬೇಕಿದೆ. ಅಲ್ಲದೆ ಕೆರೆಯ ತಡೆಗೋಡೆಯ ಬಲಬದಿಯಿಂದ ಕೆರೆಯ ಆಚೆಗೆ ತೆರಳಲು ರಸ್ತೆ ನಿರ್ಮಿಸಬೇಕು. ಕೆರೆಯ ಮಧ್ಯೆ ಬೆಳೆದಿರುವ ಮುಳ್ಳುಕಂಟಿಗಳ ಸ್ವಚ್ಛತೆ, ಕೆರೆಯ ಗಡಿ ಗುರುತು ಹಾಕಿ ತಂತಿಬೇಲಿ ಅಳವಡಿಸಬೇಕು ಎಂದು ರೈತರ ಆಗ್ರಹವಾಗಿದೆ.