ಕಬ್ಬಿಗೆ ನ್ಯಾಯಯುತ ದರ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಹಿಂಡಲಗಾ ಜೈಲಿನತ್ತ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ರೈತ ಮುಖಂಡರನ್ನು ಪೊಲೀಸರು ಬಂಧಿಸಿದ್ದರಿಂದ ಆಕ್ರೋಶಗೊಂಡ ರೈತರು ಗುರುವಾರ ಮಧ್ಯಾಹ್ನ ರಬಕವಿ–ಬನಹಟ್ಟಿ ತಾಲೂಕಿನಾದ್ಯಂತ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಬ್ಬಿಗೆ ನ್ಯಾಯಯುತ ದರ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಹಿಂಡಲಗಾ ಜೈಲಿನತ್ತ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ರೈತ ಮುಖಂಡರನ್ನು ಪೊಲೀಸರು ಬಂಧಿಸಿದ್ದರಿಂದ ಆಕ್ರೋಶಗೊಂಡ ರೈತರು ಗುರುವಾರ ಮಧ್ಯಾಹ್ನ ರಬಕವಿ–ಬನಹಟ್ಟಿ ತಾಲೂಕಿನಾದ್ಯಂತ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.ಬನಹಟ್ಟಿಯ ಬಸ್ ನಿಲ್ದಾಣದ ಸಮೀಪದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ರೈತರು ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ತಡೆದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ರೈತ ಮುಖಂಡರನ್ನು ಬಂಧಿಸುವ ಮೂಲಕ ರೈತರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಅನ್ನದಾತರ ಧ್ವನಿ ದಮನಿಸುವ ಬದಲು ಅವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ರಬಕವಿ-ಮಹಾಲಿಂಗಪುರ ರಸ್ತೆಯ ಹೊಸೂರ ಕ್ರಾಸ್‌ನಲ್ಲಿಯೂ ನೂರಾರು ರೈತರು ರಸ್ತೆ ತಡೆ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ತಾಲೂಕಿನ ವಿವಿಧೆಡೆ ರೈತರು ಗುಂಪುಗೂಡಿ ಪ್ರತಿಭಟನೆ ನಡೆಸಿದ್ದರಿಂದ ಜನಜೀವನದ ಮೇಲೂ ಪರಿಣಾಮ ಬೀರಿತು.

ಕಬ್ಬು ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ, ಗೊಬ್ಬರ ಹಾಗೂ ಸಾಗಣೆ ವೆಚ್ಚ ಹೆಚ್ಚಾಗಿರುವ ಸಂದರ್ಭದಲ್ಲಿ ಕಾರ್ಖಾನೆಗಳು ನೀಡುವ ಬೆಲೆ ರೈತರ ಬದುಕಿಗೆ ಆಸರೆಯಾಗುತ್ತಿಲ್ಲ. ರೈತರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಬದಲು ಮುಖಂಡರ ಬಂಧನದ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯವೆಂದು ನಾಯಕ ಕಿರಣ್ ಹಂದಿಗುಂದ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ. ರೈತರ ಹಕ್ಕಿನ ಹೋರಾಟವನ್ನು ಬಂಧನ, ಬೆದರಿಕೆಗಳಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಸರ್ಕಾರ ರೈತರ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕೆಂದು ಎಚ್ಚರಿಸಿದರು.