ಕನ್ನಡಪ್ರಭ ವಾರ್ತೆ ಬೆಳಗಾವಿಕಬ್ಬು ಬೆಳೆಗಾರರ ಹೋರಾಟ ಹತ್ತಿಕ್ಕಲು ಮುಂದಾಗಿರುವ ಸರ್ಕಾರ ಮತ್ತು ಪೊಲೀಸರ ಕ್ರಮದ ವಿರುದ್ಧ ರೈತರ ಆಕ್ರೋಶ ಸ್ಫೋಟಗೊಂಡಿದೆ. ರೈತ ಮುಖಂಡರಾದ ಚುನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ವಕೀಲರು, ರೈತರು ಗುರುವಾರ ಜಿಲ್ಲೆಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬು ಬೆಳೆಗಾರರ ಹೋರಾಟ ಹತ್ತಿಕ್ಕಲು ಮುಂದಾಗಿರುವ ಸರ್ಕಾರ ಮತ್ತು ಪೊಲೀಸರ ಕ್ರಮದ ವಿರುದ್ಧ ರೈತರ ಆಕ್ರೋಶ ಸ್ಫೋಟಗೊಂಡಿದೆ. ರೈತ ಮುಖಂಡರಾದ ಚುನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ವಕೀಲರು, ರೈತರು ಗುರುವಾರ ಜಿಲ್ಲೆಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಸ್ತೆಗಳನ್ನು ಬಂದ್ ಮಾಡಿದರು. ಬೆಳಗಾವಿ ನಗರ ಸೇರಿದಂತೆ ಚಿಕ್ಕೋಡಿ, ಅಥಣಿ, ಖಾನಾಪುರ, ರಾಯಬಾಗ, ಹುಕ್ಕೇರಿ, ಮುನವಳ್ಳಿ ಹಾಗೂ ಸವದತ್ತಿ ಭಾಗಗಳಲ್ಲಿ ರಾಜ್ಯ ಹೆದ್ದಾರಿಗಳನ್ನು ತಡೆದು ತಮ್ಮ ಅಸಮಾಧಾನ ಹೊರಹಾಕಿದರು.ಬೆಳಗಾವಿಯ ರಾಣಿ ಚನ್ನಮ್ಮ ವೃತ್ತಕ್ಕೆ ಏಕಾಏಕಿ ಧಾವಿಸಿದ ವಕೀಲರು ಮತ್ತು ರೈತ ಮುಖಂಡರು ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಕೆಲಕಾಲ ರಸ್ತೆ ತಡೆ ನಡೆಸಿ ವಾಹನ ಸಂಚಾರ ಸ್ಥಗಿತಗೊಳಿಸಿದರು. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರೈತರ ಬಂಧನವನ್ನು ಖಂಡಿಸಿದರು. ರಸ್ತೆ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದರು. ಬಳಿಕ ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ರೈತ ಮುಖಂಡ ಸುರೇಶ ಸಂಪಗಾವ ಮಾತನಾಡಿ, ನಿಷೇಧಾಜ್ಞೆ ಜಾರಿಗೊಳಿಸಲು ರೈತರು ಮಾಡಿದ ತಪ್ಪಾದರೂ ಏನು? ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಎಲ್ಲಿಯೂ ಕಾನೂನು ಉಲ್ಲಂಘಿಸಿಲ್ಲ. ಆದರೆ, ರಾತ್ರೋರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಿ ರೈತ ಮುಖಂಡರನ್ನು ಬಂಧಿಸಿರುವುದು ಖಂಡನೀಯ. ರೈತರ ಪರವಾಗಿ ವಕೀಲರು ನಮ್ಮೊಂದಿಗೆ ಕೈಜೋಡಿಸಿರುವುದು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ. ತಕ್ಷಣ ಬಂಧಿತ ರೈತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರೈತರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಭಗತ ಸಿಂಗ್ ಅವರ ಹಾದಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ವಕೀಲ ಪ್ರವೀಣ ಬಾಬಣ್ಣವರ ಮಾತನಾಡಿ, ಪ್ರತಿ ಟನ್ ಕಬ್ಬಿಗೆ ₹5,500 ನೀಡುವಂತೆ ರೈತರು ಬೇಡಿಕೆ ಇಟ್ಟಿದ್ದರು. ಆದರೆ, ಕೇವಲ ₹3,600 ದರ ಘೋಷಿಸಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನದ ಬಗ್ಗೆಯೂ ಸ್ಪಷ್ಟನೆ ಕೇಳಿ ಹೋರಾಟಕ್ಕಿಳಿದ ರೈತರ ಮೇಲೆ ನಿಷೇಧಾಜ್ಞೆ ಹೇರಲಾಗಿದೆ. ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ರೈತರನ್ನು ವಶಕ್ಕೆ ಪಡೆಯಲಾಗಿದೆ. ಬುಧವಾರ ರಾತ್ರಿ 11ಗಂಟೆ ಸುಮಾರಿಗೆ ಮುಕ್ತಿಮಠದಲ್ಲಿ ಪೊಲೀಸ್ ಆಯುಕ್ತರು ರೈತ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಆದರೂ ಗುರುವಾರ ಅವರನ್ನು ವಶಕ್ಕೆ ಪಡೆದಿರುವುದು ಖಂಡನೀಯ. ರೈತರ ಪರವಾಗಿ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಕಾನೂನು ಸಮರ ಸಾರುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ದಡ್ಡಿ, ಮುರುಗಯ್ಯ ಕಲ್ಮಠ, ಬಸವರಾಜ ಅರಳಿ ಸೇರಿದಂತೆ ಹಲವು ವಕೀಲರು, ರೈತರು ಪಾಲ್ಗೊಂಡಿದ್ದರು.
ಜಿಲ್ಲಾದ್ಯಂತ ಹೆದ್ದಾರಿಗಳು ಸ್ತಬ್ಧ:ಬೆಳಗಾವಿಯಲ್ಲಿ ರೈತ ಮುಖಂಡರನ್ನು ವಶಕ್ಕೆ ಪಡೆದಿರುವ ಸುದ್ದಿ ಹರಡುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ಭುಗಿಲೆದ್ದವು. ಚಿಕ್ಕೋಡಿ ಪಟ್ಟಣದ ಬಸವ ವೃತ್ತದಲ್ಲಿ ರೈತರು ರಸ್ತೆ ತಡೆದು ಪೊಲೀಸರ ಕ್ರಮ ಖಂಡಿಸಿದರು. ಇದರಿಂದ ಹಲವು ಮಾರ್ಗಗಳ ಬಸ್ ಸಂಚಾರ ಹಾಗೂ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಖಾನಾಪುರ ತಾಲೂಕಿನ ಲಿಂಗನಮಠ ಕ್ರಾಸ್ನಲ್ಲಿ ಬೆಳಗಾವಿ-ಗೋವಾ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು. ಚುನಪ್ಪ ಪೂಜೇರಿ ಮತ್ತು ಶಶಿಕಾಂತ ಗುರೂಜಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರು ಜಮಾಯಿಸಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಬಂದ್ ಮಾಡಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಸೇತುವೆ ಹಾಗೂ ರಸ್ತೆ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತವು. ಮುಗಳಖೋಡ ಕ್ರಾಸ್ನಲ್ಲಿಯೂ ರೈತರು ರಸ್ತೆಗಳಿಗೆ ಮುಳ್ಳು ಹಾಗೂ ಬ್ಯಾರಿಕೇಡ್ಗಳನ್ನು ಅಡ್ಡ ಇಟ್ಟು ಜತ್ತ-ಜಾಂಬೋಟಿ ಹೆದ್ದಾರಿ ತಡೆದರು.
ಪೊಲೀಸ್ ವಾಹನಕ್ಕೆ ಬೇಲಿ ಹಾಕಿದ ರೈತರು:ಹುಕ್ಕೇರಿ ತಾಲೂಕಿನ ಕರಗುಪ್ಪಿ ಬಳಿ ಮೈಸೂರಿನಿಂದ ಹೋರಾಟಕ್ಕೆ ಆಗಮಿಸಿದ್ದ ರೈತರನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವನ್ನು ಪ್ರತಿಭಟನಾಕಾರರು ತಡೆದರು. ವಾಹನಕ್ಕೆ ಅಡ್ಡಲಾಗಿ ಬೇಲಿ ಹಾಕಿ ನಿಲ್ಲಿಸಿದ ರೈತರು, ಅದರಲ್ಲಿದ್ದ ಹೋರಾಟಗಾರರನ್ನು ಕೆಳಗಿಳಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ರೈತರು ಗೋಕಾಕ-ಸವದತ್ತಿ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ ತಡೆದು ಟೈರ್ಗಳಿಗೆ ಬೆಂಕಿ ಹಚ್ಚಿದರು. ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರೈತ ಮುಖಂಡರ ಬಂಧನದ ವಿರುದ್ಧ ಆರಂಭವಾದ ಪ್ರತಿಭಟನೆ ಇದೀಗ ಜಿಲ್ಲೆಯ ಹಲವು ತಾಲೂಕುಗಳಿಗೆ ವ್ಯಾಪಿಸಿದ್ದು, ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರ ಬೇಡಿಕೆ ಈಡೇರಿಸುವ ಬದಲು ಬಂಧನದ ಮೂಲಕ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗಿದೆ ಎಂಬ ಆಕ್ರೋಶ ಪ್ರತಿಭಟನಾ ಸ್ಥಳಗಳಲ್ಲಿ ವ್ಯಕ್ತವಾಗುತ್ತಿದೆ.