ರೈತರ ಸಮಸ್ಯೆ ಪರಿಹರಿಸಲು ಹೋರಾಟ: ಶಿವರಾಮ

KannadaprabhaNewsNetwork | Published : May 27, 2024 1:00 AM

ಸಾರಾಂಶ

ಭಾರತೀಯ ಕಿಸಾನ್ ಸಂಘವು ದೇಶದಲ್ಲಿ ಕಾನೂನಾತ್ಮಕವಾಗಿ ಮತ್ತು ವ್ಯವಸ್ಥಿತವಾಗಿ ರೈತರ ಪರ ಧ್ವನಿ ಎತ್ತುವ ಏಕೈಕ ರೈತ ಸಂಘಟನೆಯಾಗಿದೆ.

ಅಂಕೋಲಾ: ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ಹೋರಾಟಗಳನ್ನು ಕೈಗೆತ್ತಿಕೊಂಡು, ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿಯೂ ಇರುವ ಸಮಸ್ಯೆಗಳನ್ನು ಗಮನಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಗ್ರಾಮ ಸಮಿತಿಗಳನ್ನು ಬಲಗೊಳಿಸುವ ಮೂಲಕ ರೈತರ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಭಾರತೀಯ ಕಿಸಾನ್ ಸಂಘದ ಉಕ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ್ ಕನಕನಹಳ್ಳಿ ತಿಳಿಸಿದರು.

ಪಟ್ಟಣದಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಉಕ ಜಿಲ್ಲಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರಾಷ್ಟ್ರೀಯ ರೈತ ಸಂಘಟನೆಯಲ್ಲಿ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದೇಶದಲ್ಲಿ ಕಾನೂನಾತ್ಮಕವಾಗಿ ಮತ್ತು ವ್ಯವಸ್ಥಿತವಾಗಿ ರೈತರ ಪರ ಧ್ವನಿ ಎತ್ತುವ ಏಕೈಕ ರೈತ ಸಂಘಟನೆಯಾಗಿದೆ. ಉಕ ಜಿಲ್ಲೆಯಲ್ಲಿ ಕಿಸಾನ್ ಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರಾಂತ ರಾಜ್ಯದವರೆಗೂ ಗುರುತಿಸಿಕೊಂಡಿದೆ ಎಂದರು.

ಪ್ರಾಂತ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಮಾತನಾಡಿ, ಸದಸ್ಯತ್ವ ಅಭಿಯಾನವನ್ನು ಯಶಸ್ವಿಯಾಗಿದೆ. ತಾಲೂಕು ಸಮಿತಿಗಳನ್ನು ರಚಿಸಿ ಪ್ರತಿ ತಾಲೂಕಿನಲ್ಲಿಯೂ ನಮ್ಮ ಚಟುವಟಿಕೆ ಚುರುಕುಗೊಳಿಸಲು ಪ್ರಯತ್ನಿಸಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ನರಸಿಂಹ ಸಾತೊಡ್ಡಿ ಅವರು ಸರ್ಕಾರದ ರೈತ ವಿರೋಧಿ ಕ್ರಮದ ಬಗ್ಗೆ ಆಕ್ಷೇಪಿಸಿ, ನೀರಾವರಿ ವಿದ್ಯುತ್ ಪಂಪುಗಳ ಮಂಜೂರಿಗೆ ಅತಿಯಾಗಿ ಶುಲ್ಕ ಏರಿಸಿರುವ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಈ ಬಗ್ಗೆ ರಾಜ್ಯವ್ಯಾಪಿ ಕಿಸಾನ್ ಸಂಘದಿಂದ ಪ್ರತಿಭಟನೆ ವ್ಯಕ್ತಪಡಿಸಬೇಕು ಎಂದರು.

ಎಂ.ಆರ್. ಹೆಗಡೆ ಹೊನ್ನಾವರ ಮಾತನಾಡಿ, ರೈತರಿಗೆ ವನ್ಯಪ್ರಾಣಿಗಳಿಂದ ತೊಂದರೆ ಒಂದೆಡೆಯಾದರೆ ಸಣ್ಣಪುಟ್ಟ ವಿಷಯಗಳಿಗೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ಆಕ್ಷೇಪಿಸಿದರು.

ಗಣಪತಿ ಪಟಗಾರ್ ಕುಮಟಾ, ಡಿ.ಎಂ. ನಾಯ್ಕ ಹೊನ್ನಾವರ, ನಾರಾಯಣ ಭಟ್ಟ ಭಟ್ಕಳ, ವಿವಿಧ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. ಜಿಲ್ಲೆಯಲ್ಲಿ ಕೈಗೊಂಡ ಹೋರಾಟ ಮತ್ತು ಫಲಶೃತಿ ಬಗ್ಗೆ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ್ ವಿವರಿಸಿದರು. ಪ್ರಾಂತ ಕಾರ್ಯದರ್ಶಿ ಬಾ.ನಾ. ಮಾಧವ, ಜಿಲ್ಲಾ ಕೋಶಾಧ್ಯಕ್ಷ ಗೋಪಾಲಕೃಷ್ಣ ಭಟ್ಟ ಬಾಳೆಗದ್ದೆ, ಅಂಕೋಲಾ ತಾಲೂಕಾಧ್ಯಕ್ಷ ರಾಘವೇಂದ್ರ ಗಾಂವ್ಕಾರ್, ಗಣಪತಿ ನಾಯ್ಕ, ಆರ್.ಟಿ. ಭಾಗ್ವತ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.

Share this article