ತಾಲೂಕಿನ ಕಾನಸೂರಿನಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ ಸಾವನ್ನಪ್ಪಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ತಾಲೂಕಿನ ಕಾನಸೂರಿನಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ ಸಾವನ್ನಪ್ಪಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲಾಗುತ್ತಿದೆ. ಆ ವಿದ್ಯಾರ್ಥಿಯ ಸಾವು ಆತ್ಮಹತ್ಯೆಯಲ್ಲ ಎನ್ನುವ ಸಂಶಯ ಕಂಡುಬರುತ್ತಿದೆ. ಆತನ ಮಾನಸಿಕ ಸ್ಥಿತಿ, ಆತ್ಮಹತ್ಯೆಗೆ ಬಳಸಿದ ಚಿಕ್ಕದಾದ ಟವೆಲ್, ಕಿಟಕಿ ಇವನ್ನೆಲ್ಲ ಗಮನಿಸಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದು ಕಂಡುಬರುತ್ತದೆ. ಈ ಕುರಿತು ಈವರೆಗೆ ಸೂಕ್ತ ತನಿಖೆ ಜರುಗುತ್ತಿಲ್ಲ. ಈ ಪ್ರಕರಣದ ಸಮರ್ಪಕ ತನಿಖೆಯಾಗಬೇಕು ಎಂದು ಆಗ್ರಹಿಸಿ ಜೂ.18ರ ಬೆಳಗ್ಗೆ ಸ್ಥಳೀಯ ತಹಸೀಲದಾರ ಕಚೇರಿ ಎದುರು ಬಿಜೆಪಿ, ಜೆಡಿಎಸ್ ಹಾಗೂ ಇನ್ನಿತರ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸಲಿವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪಾಲಕರು ಶಾಲೆಯ ಕಚೇರಿಯ ಬಳಿ ಭೇಟಿ ಮಾಡಲು ಅವಕಾಶವಿದ್ದು ಅವರು ವಸತಿ ಮಾಡುವಲ್ಲಿ ಪ್ರವೇಶವಿಲ್ಲ. ವಸತಿ ಮಾಡುವ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳಿಲ್ಲ. ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದರು. ಹೊರಗಡೆ ಹೇಳದಂತೆ ಬೆದರಿಕೆ ಹಾಕುತ್ತಿದ್ದುದರ ಬಗ್ಗೆ ಹಲವು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಮೃತ ವಿದ್ಯಾರ್ಥಿಯ ತಾಯಿ ಜಯಶ್ರೀ ಗೌಡ ಕಣ್ಣಿರು ಸುರಿಸುತ್ತ ಮಾತನಾಡಿ, ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗ ಅಲ್ಲ ಎಂದು ನನಗೆ ಪೂರ್ಣ ನಂಬಿಕೆ ಇದೆ. ಅವನ ಸಾವಿನ ಬಗ್ಗೆ ವಸತಿ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಮಕ್ಕಳು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆಯೇ ಹೊರತು ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಲ್ಲಿ ನಡೆದಿರುವ ಘಟನೆ ಬೆಳಕಿಗೆ ಬರಬೇಕು. ನಮಗೆ ನ್ಯಾಯ ಸಿಗಬೇಕು ಎಂದು ಕೋರಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಮಾರುತಿ ನಾಯ್ಕ ಹೊಸೂರು, ಗುರುರಾಜ ಶಾನಭಾಗ, ಸುರೇಶ ನಾಯ್ಕ, ಮಂಜುನಾಥ ಭಟ್ಟ, ತೋಟಪ್ಪ ನಾಯ್ಕ, ಮೃತ ವಿದ್ಯಾರ್ಥಿ ತಂದೆ ಕೃಷ್ಣ ಗೌಡ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.