ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

KannadaprabhaNewsNetwork |  
Published : Dec 29, 2025, 02:45 AM IST
ಪೋಟೋ ಶೀಷೀಕೆ 27ಎಸ್‌ವಿಆರ್‌01ನಾಗರಾಜ ಶಂಕ್ರಪ್ಪ ಅಂಗಡಿ | Kannada Prabha

ಸಾರಾಂಶ

ಸವಣೂರು ತಾಲೂಕಿನ ಮಂತ್ರೋಡಿ ಗ್ರಾಮಕ್ಕೆ ಶನಿವಾರ ಶೋಕದ ದಿನವಾಗಿ ಪರಿಣಮಿಸಿದೆ. ಶಿಗ್ಗಾಂವಿಯ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಾ ವಿಭಾಗದ ಪ್ರಥಮ ಪಿಯುಯಲ್ಲಿ ಓದುತ್ತಿದ್ದ ಯುವಕ ನಾಗರಾಜ ಶಂಕ್ರಪ್ಪ ಅಂಗಡಿ, ಗ್ರಾಮದ ಕೆಂಪಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಡೀ ಗ್ರಾಮವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.

ಸವಣೂರು: ತಾಲೂಕಿನ ಮಂತ್ರೋಡಿ ಗ್ರಾಮಕ್ಕೆ ಶನಿವಾರ ಶೋಕದ ದಿನವಾಗಿ ಪರಿಣಮಿಸಿದೆ. ಶಿಗ್ಗಾಂವಿಯ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಾ ವಿಭಾಗದ ಪ್ರಥಮ ಪಿಯುಯಲ್ಲಿ ಓದುತ್ತಿದ್ದ ಯುವಕ ನಾಗರಾಜ ಶಂಕ್ರಪ್ಪ ಅಂಗಡಿ, ಗ್ರಾಮದ ಕೆಂಪಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಡೀ ಗ್ರಾಮವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.

ನಾಗರಾಜ ಓದು ಮಾತ್ರವಲ್ಲ, ಮನೆಯ ಹೊಣೆಗಾರಿಕೆಯನ್ನು ಸಹ ತನ್ನ ಹೆಗಲ ಮೇಲೆ ಹೊತ್ತಿದ್ದ ಯುವಕ. ತಂದೆ ಶಂಕ್ರಪ್ಪ ವಿಂಡ್ ಫ್ಯಾನ್ ಕಾವಲುಗಾರನಾಗಿ ದುಡಿಯುತ್ತಿದ್ದರೆ, ತಾಯಿ ಮಹಿಳಾ ಸಂಘಗಳನ್ನು ನಿರ್ವಹಿಸುತ್ತಾ ಮನೆಗೆಲಸ ಮಾಡಿಕೊಂಡು ಕುಟುಂಬ ಸಾಗಿಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ನಾಗರಾಜ ಕಾಲೇಜು ವ್ಯಾಸಂಗದ ಜತೆಗೆ ಕೃಷಿ ಜಮೀನಿನ ನಿರ್ವಹಣೆಯನ್ನೂ ಮಾಡುತ್ತಾ, ಕುಟುಂಬಕ್ಕೆ ನೆರವಾಗುತ್ತಿದ್ದ.

ಶನಿವಾರ ಕಾಲೇಜಿಗೆ ಅರ್ಧ ದಿನ ರಜೆ ಇದ್ದ ಹಿನ್ನೆಲೆ, ನಾಗರಾಜ, ಮನೆಯ ಎತ್ತುಗಳ ಮೈ ತೊಳೆಯಲು ಕೆಂಪಿ ಕೆರೆಗೆ ತೆರಳಿದ್ದ. ಬೆಳಗ್ಗೆ ಸುಮಾರು 11ರಿಂದ 11.15 ಗಂಟೆಯ ನಡುವಿನ ಅವಧಿಯಲ್ಲಿ, ಎತ್ತುಗಳನ್ನು ಕೆರೆಯಲ್ಲಿ ಈಜಲು ಬಿಟ್ಟು, ಅವುಗಳ ಬಾಲ ಹಿಡಿದುಕೊಂಡು ಕೆರೆಯಲ್ಲಿ ಈಜುತ್ತಾ ಸಾಗುತ್ತಿದ್ದ ವೇಳೆ, ಆಕಸ್ಮಿಕವಾಗಿ ಹಿಡಿದಿದ್ದ ಎತ್ತಿನ ಬಾಲ ಕೈ ತಪ್ಪಿದೆ. ಈಜು ಬಾರದ ನಾಗರಾಜ ಕ್ಷಣಾರ್ಧದಲ್ಲಿ ನಿಯಂತ್ರಣ ತಪ್ಪಿ ಕೆರೆಯ ನೀರಿನಲ್ಲಿ ಮುಳುಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಕೆಂಪಿ ಕೆರೆ ತೀರದಲ್ಲಿ ಜನಸ್ತೋಮ ಸೇರಿತ್ತು. ಸ್ಥಳೀಯರು ಸಾಕಷ್ಟು ಹರಸಾಹಸ ಪಟ್ಟರೂ, ನಾಗರಾಜ ದೇಹ ದೊರಕದ ಕಾರಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಯುವಕ ನಾಗರಾಜನ ದೇಹ ಹೊರತಂದರು. ಆತನ ಬಾಯಿಯಿಂದ ನೀರು ಹೊರಬರುವುದನ್ನು ಕಂಡ ಕುಟುಂಬಸ್ಥರು ತಕ್ಷಣವೇ ಚಿಕಿತ್ಸೆಗೆಂದು ಸವಣೂರಿನ ತಾಲೂಕು ಆಸ್ಪತ್ರೆಗೆ ಕರೆತಂದರು. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಮಗನನ್ನು ಓದಿಸಿ ಭವಿಷ್ಯ ಕಟ್ಟಬೇಕು ಎಂಬ ತಂದೆ-ತಾಯಿಯ ಆಸೆ, ಕೆಂಪಿ ಕೆರೆಯಲ್ಲಿ ಹೋಮವಾಗಿದೆ. ಕುಟುಂಬದ ಆಕ್ರಂದನ ಮನಕಲಕುತ್ತಿತ್ತು.

ಗ್ರಾಮಸ್ಥರು, ಸಹಪಾಠಿಗಳು ನಾಗರಾಜನ ಅಕಾಲಿಕ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೆಂಪಿ ಕೆರೆಯ ತೀರ ಇಂದು ಮೌನವಾಗಿದ್ದರೂ, ಅದರೊಳಗೆ ಒಂದು ಬಡ ಕುಟುಂಬದ ಭವಿಷ್ಯ ಕಣ್ಣೀರಾಗಿ ಬೆರೆತಿದೆ.

ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!