ಕನ್ನಡಪ್ರಭ ವಾರ್ತೆ ಬೀಳಗಿ
ನಿರಂತರ ಓದು ಮತ್ತು ಬರಹ ಮನಸ್ಸನ್ನು ನಿಯಂತ್ರಣದಲ್ಲಿಡುತ್ತದೆ. ನಿತ್ಯ ಪಠ್ಯೇತರ ಚಟುವಟಿಕೆಯ ಜತೆಗೆ ಪಠ್ಯದ ಕಡೆಗೆ ಗಮನ ಹರಿಸಿದರೇ ಯಾವುದೇ ವಿಶ್ವವಿದ್ಯಾಲಯ ನೀಡದ ಶಿಕ್ಷಣ ನಾವು ಪಡೆಯಬಹುದು ಎಂದು ಬಾಗಲಕೋಟೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಬೀಳಗಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ, ಪರಿಶಿಷ್ಟ ಪಂಗಡ ಬಾಲಕರ ವಸತಿ ನಿಲಯದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟವಾದ ಗುರಿ ಇಟ್ಟುಕೊಂಡು, ಆ ದಿಶೆಯಲ್ಲಿಯೇ ಪ್ರಯತ್ನ ಶೀಲರಾಗಿರಬೇಕು ಎಂದರು.
ಬೀಳಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ.ಪಾಟೀಲ್ ಮಾತನಾಡಿ, ವಸತಿ ನಿಲಯದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು ಶ್ಲಾಘನೀಯ. ಭವಿಷ್ಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿರಿ ಎಂದು ಹಾರೈಸಿದರು.ಪ.ಜಾ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಪ್ರಿಯಾಂಕ ಕುಂಬಾರ (ಶೇ.97), ಭಾರತಿ ಲಮಾಣಿ (ಶೇ.94), ಗೀತಾ ಮಾದರ (ಶೇ.94), ಗೌರಮ್ಮ ಕೊಟಗಿ (ಶೇ.92.5), ಯಲ್ಲವ್ವ ಹಿರೇಮನಿ (ಶೇ.92), ಭಾಗ್ಯಶ್ರೀ ಬೆಳವಣಕಿ (ಶೇ.89.33), ರೇಷ್ಮಾ ಲಮಾಣಿ (ಶೇ.87.5), ಪ.ಜಾ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಆಕಾಶ ರಾಠೋಡ (ಶೇ.9೦.5), ರಾಘವೇಂದ್ರ ಲಮಾಣಿ (ಶೇ.88.16), ರಮೇಶ ಸತ್ತಿಗೇರಿ (ಶೇ.91.67), ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಪ್ರತಿಭಾನ್ವಿತ ವಿದ್ಯಾರ್ಥಿ ವಿನಾಯಕ ಕುಲಕರ್ಣಿ (ಶೇ.85.17) ವಿದ್ಯಾರ್ಥಿಗಳನ್ನು ಪಾಲಕರ ಸಮ್ಮುಖದಲ್ಲಿ ಗೌರವಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕಿ ಬಿ.ಜಿ.ಮಠ, ವಸತಿ ನಿಲಯದ ಮೇಲ್ವಿಚಾರಕರಾದ ಬಿ.ಎಚ್.ಬಾರಾಗಣಿ, ದ್ಯಾಮಣ್ಣ ಮಾದರ, ಎಸ್.ಎ.ಬಿಜಾಪುರ, ಚಂದ್ರು ಮಾದರ ಭಾಗವಹಿಸಿದ್ದರು.