ಮುಂಡಗೋಡ: ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಬರೆಯುತ್ತಿದ್ದ ವೇಳೆ ಕಾಡು ಜೀರಿಗೆ ಹುಳು ಕಚ್ಚಿ ವಿದ್ಯಾರ್ಥಿ ಗಾಯಗೊಂಡ ಘಟನೆ ಶನಿವಾರ ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.
ತಾಲೂಕಿನ ಓಣಿಕೇರಿ ಗ್ರಾಮದ ಪರಶುರಾಮ ಪಾಂಡುರಂಗ ಕೋಣನಕೇರಿ (೧೦) ಕಾಡು ಜೀರಿಗೆ ಹುಳು ಕಡಿತಕ್ಕೊಳಗಾದ ಬಾಲಕ. ಶನಿವಾರ ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ನಡೆಯಿತು. ಪರೀಕ್ಷೆ ಬರೆಯುತ್ತಿದ್ದ ವೇಳೆ ಏಕಾಏಕಿ ಕಾಡು ಜೀರಿಗೆ ಹುಳು ದಾಳಿ ನಡೆಸಿ ಬಾಲಕನ ಕೈಗೆ ಕಚ್ಚಿದೆ. ತಕ್ಷಣ ಎಚ್ಚೆತ್ತುಕೊಂಡ ಆಡಳಿತ ಸಿಬ್ಬಂದಿ ಹುಳುಗಳನ್ನು ಓಡಿಸಿದ್ದಾರೆ. ಸ್ಥಳದಲ್ಲಿದ್ದ ಆರೋಗ್ಯ ಸಿಬ್ಬಂದಿ ಬಾಲಕನಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಕ್ಕಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಿ ಪರೀಕ್ಷೆ ಬರೆಸಲಾಯಿತು. ತಕ್ಷಣವೇ ಕೈಗೆ ಬಾವು ಬಂದರೂ ಬಾಲಕ ಪರೀಕ್ಷೆ ಬರೆದಿದ್ದಾನೆ.ಪಾಲಕರ ಆಕ್ರೋಶ:
ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೊಠಡಿಯಲ್ಲಿ ಹುಳುಗಳು ಗೂಡು ಕಟ್ಟಿಕೊಂಡಿದ್ದರೂ ಅದನ್ನು ಗಮನಿಸದೆ ಕನಿಷ್ಠ ಸ್ವಚ್ಛಗೊಳಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ ಆಡಳಿತದ ವಿರುದ್ಧ ಪಾಲಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪರೀಕ್ಷೆ ಬರೆದ ೩೬೬ ಮಕ್ಕಳು:
ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ ೩೯೩ ವಿದ್ಯಾರ್ಥಿಗಳಲ್ಲಿ ೩೬೬ ಮಕ್ಕಳು ಪರೀಕ್ಷೆ ಬರೆದಿದ್ದು, ೨೭ ಮಕ್ಕಳು ಗೈರು ಹಾಜರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರಿರಾಮ ಹೆಗಡೆ ತಿಳಿಸಿದ್ದಾರೆ.ಬೇಜವಾಬ್ದಾರಿ
ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸರ್ಕಾರದಿಂದ ಸಾಕಷ್ಟು ಖರ್ಚು-ವೆಚ್ಚ ಮಾಡಲಾಗುತ್ತದೆ. ಇದರ ನಡುವೆ ಕನಿಷ್ಠ ಕೊಠಡಿ ಸ್ವಚ್ಛಗೊಳಿಸದೆ ಬೇಜವಾಬ್ದಾರಿ ಮೆರೆಯಲಾಗಿದೆ. ಮಕ್ಕಳ ಭವಿಷ್ಯ ನಿರ್ಮಾಣ ಮಾಡಬೇಕಾದ ಶಿಕ್ಷಕರಲ್ಲಿ ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸುವ ಬದ್ಧತೆ ಇಲ್ಲದಂತಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ ಎಂದು ತಾಪಂ ಮಾಜಿ ಸದಸ್ಯ ಮಹೇಶ ಹೊಸಕೊಪ್ಪ ಹೇಳಿದ್ದಾರೆ.