ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೇ ಮಾತ್ರ ಯಶಸ್ಸು ಸಾಧ್ಯ

KannadaprabhaNewsNetwork |  
Published : May 09, 2025, 12:30 AM IST
9 | Kannada Prabha

ಸಾರಾಂಶ

ನಾವು ಓದುವುದಕ್ಕೂ, ಮುಂದೆ ನಮ್ಮ ಜೀವನದಲ್ಲಿ ನಡೆಯುವುದಕ್ಕೂ ಸಂಬಂಧವಿರುವುದಿಲ್ಲ. ಓದುವುದೇ ಬೇರೆ, ಮಾಡುವುದೇ ಬೇರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೇ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ ಗೌಡ ತಿಳಿಸಿದರು.

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆಯ ಸಮಾರೋಪ, ಪ್ರತಿಭಾ ಪುರಸ್ಕಾರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನು ಸಹ ಇದೇ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದೆ. ಈ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ನನಗೆ, ಇದೇ ಸಂಸ್ಥೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಸನ್ಮಾನ ಸ್ವೀಕರಿಸಿದ್ದು ಎಲ್ಲಾ ಸಾಧನೆಗಿಂತ ದೊಡ್ಡದು ಎಂದು ಅವರು ಸಂತಸ ವ್ಯಕ್ತಪಡಿಸಿದರು.

ನಾನು ಓದುವ ಸಂದರ್ಭದಲ್ಲಿ ರಾಜಕೀಯಕ್ಕೆ ಬರುವ ಯಾವ ಚಿಂತನೆಯೂ ಇರಲಿಲ್ಲ. ಎಂ.ಎಸ್‌ ಓದಬೇಕು ಎಂದು ವಿದೇಶಕ್ಕೆ ಹೋಗಿದ್ದೆ. ಆದರೆ, ಭಾರತಕ್ಕೆ ವಾಪಸ್ ಬಂದಾಗ ಆಕಸ್ಮಿಕವಾಗಿ ಚುನಾವಣೆಗೆ ಧುಮುಕಿ, ಇಂದು ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ. ಅನೇಕ ದಾರಿಗಳು, ಸವಾಲುಗಳು ಬರುತ್ತಿರುತ್ತವೆ. ಅದಕ್ಕೆ ನಾವು ಸಿದ್ಧರಿರಬೇಕು. ಈ ಎಲ್ಲಾ ಹಂತಗಳನ್ನು ಎದುರಿಸಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಧೈರ್ಯ ಮತ್ತು ಆತ್ಮವಿಶ್ವಾಸ ಎಂದು ಅವರು ಹೇಳಿದರು.

ನಾವು ಓದುವುದಕ್ಕೂ, ಮುಂದೆ ನಮ್ಮ ಜೀವನದಲ್ಲಿ ನಡೆಯುವುದಕ್ಕೂ ಸಂಬಂಧವಿರುವುದಿಲ್ಲ. ಓದುವುದೇ ಬೇರೆ, ಮಾಡುವುದೇ ಬೇರೆ. ನಿಮ್ಮ ತಂದೆ-ತಾಯಿಗಳು ನಿಮ್ಮ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ. ಅವರು ಹೇಳಿದನ್ನು ನಾವು ಕೇಳಬೇಕು ಎಂದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಉದ್ಯೋಗ ಗಿಟ್ಟಿಸಿಕೊಳ್ಳುವ ದೃಷ್ಟಿಯಲ್ಲಿ ನಾವು ಓದಬೇಕು ಮತ್ತು ಅದಕ್ಕೆ ಬೇಕಾದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ಪೋಷಕರು ತಮ್ಮ ಮಕ್ಕಳ ಉದ್ಯೋಗಕ್ಕಾಗಿ ರಾಜಕೀಯ ವ್ಯಕ್ತಿಗಳ ಮತ್ತು ಬೇರೆಯವರ ಮುಂದೆ ತಮ್ಮ ಸ್ವಾಭಿಮಾನವನ್ನು ಬಿಟ್ಟು ಕೈಚಾಚಿ ನಿಲ್ಲುವಂತಾಗಬಾರದೆಂದರೇ ನೀವು ಚೆನ್ನಾಗಿ ಓದಬೇಕು, ಬದುಕನ್ನು ನಿಭಾಯಿಸುವಲ್ಲಿ ಗಟ್ಟಿಯಾಗಬೇಕು. ಬದುಕು ಕಟ್ಟಿಕೊಳ್ಳುವುದಕ್ಕೆ ನೂರಾರು ಅವಕಾಶಗಳಿವೆ ಎಂದು ಅವರು ಕಿವಿಮಾತು ಹೇಳಿದರು.

ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ. ಶಿವರಾಜು ಮಾತನಾಡಿ, ವಿದ್ಯೆ ಎಂಬುದು ಕೇವಲ ಪ್ರಶಸ್ತಿ ಪತ್ರಗಳನ್ನು ಕೊಡುವುದಲ್ಲ. ಮೊದಲು ಮಾನವರನ್ನಾಗಿ, ಮನುಷ್ಯತ್ವವನ್ನು ಬೆಳೆಸುವುದೇ ವಿದ್ಯೆ. ಮನಷ್ಯನ ಶ್ರೇಷ್ಠ ಚಿಂತನೆಗಳೇ ಜೀವನದಲ್ಲಿ ನಮ್ಮನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗುವುದು. ಯುವಕರೇ ರಾಷ್ಟ್ರದ ಆತ್ಮ, ನೀವೇ ದೇಶದ ಅಭಿವೃದ್ಧಿ. ಈ ನಿಟ್ಟಿನಲ್ಲಿ ಗಾಂಧಿಯ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಟಿ ಅನುಷಾ ರೈ ಮಾತನಾಡಿ, ನಿಮ್ಮ ತಂದೆ- ತಾಯಿ ಹೆಮ್ಮೆ ಪಡುವಂತೆ ನೀವೆಲ್ಲರು ಸಾಧನೆ ಮಾಡಬೇಕು. ಜೀವನದಲ್ಲಿ ಕಲಿತ ವಿದ್ಯೆಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಿದ್ಯೆಯನ್ನು ಚೆನ್ನಾಗಿ ಕಲಿತರೇ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಬದುಕಬಹುದು. ಇದನ್ನು ನೆನಪಿಟ್ಟುಕೊಂಡು ವಿದ್ಯಾರ್ಥಿ ಜೀವನ ಅರ್ಥಪೂರ್ಣವಾಗಿ ಸಾಗಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಸಂಸದೆಯಾಗಿ ಹೊರಹೊಮ್ಮಿದ ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿನಿ ನಿದಾ ತರನ್ನುಂ ಅವರನ್ನು ಸನ್ಮಾನಿಸಲಾಯಿತು.

ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ. ರೇಣುಕಾರ್ಯ, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಸಿಇಒ ಡಾ.ಎಸ್.ಆರ್. ರಮೇಶ್, ಪರೀಕ್ಷಾಂಗ ನಿಯಂತ್ರಣಾಧಿಕಾರಿ ಶ್ರುತಿ ಪೂಣಚ್ಚ, ಪ್ರತಿಭಾ ವೇದಿಕೆಯ ಸಂಚಾಲಕ ಎಂ. ನಾಗೇಶ, ವಿದ್ಯಾರ್ಥಿ ಸಂಸತ್‌ಸಂಚಾಲಕಿ ಡಾ.ಪಿ.ಜಿ. ಪುಷ್ಪಾರಾಣಿ ಮೊದಲಾದವರು ಇದ್ದರು. ಸುನಿಲ್ ನಿರೂಪಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ