ಕನ್ನಡಪ್ರಭ ವಾರ್ತೆ ವಿಜಯಪುರ
ಪಾಕಿಸ್ತಾನ ಹಾಗೂ ಇತರರಿಗೆ ದೇವರು ರಕ್ಷಣೆ ಮಾಡಲಿ ಎಂದು ದೇಶ ವಿರೋಧಿ ಪೋಸ್ಟ್ ಹಾಕಿರುವ ವಿದ್ಯಾರ್ಥಿನಿ, ಗಡಿಯ ಕಡೆಗೆ ಹೋಗಬೇಡಿ, ಗಡಿಯಿಂದ 200 ಕಿಲೋ ಮೀಟರ್ ಹೋಗಬೇಡಿ ಎಂದು ಪೋಸ್ಟ್ ಹಾಕಿ ಪಾಕಿಸ್ತಾನ ಜನರ ಪರ ಪ್ರೇಮ ಮೆರೆದಿದ್ದಾಳೆ. ಪೋಸ್ಟ್ ಹಾಕಿರುವ ವಿದ್ಯಾರ್ಥಿನಿಯ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ. ಹೀಗಾಗಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವಿನೋದ ದೊಡಮನಿ ಸ್ವಯಂ ದೂರು ದಾಖಲು ಮಾಡಿಕೊಂಡಿದ್ದಾರೆ. ಪಾಕ್ ಪರ ಕಾಳಜಿ ತೋರಿ ಪೋಸ್ಟ್ ಹಾಕಿದ್ದಕ್ಕೆ ದೇಶದ ಸಾರ್ವಭೌಮತ್ವದ ಘನತೆಗೆ ಅಪಾಯಕಾರಿಯಾಗುವ ರೀತಿಯಲ್ಲಿ ಪೋಸ್ಟ್ ಹಾಕಿದ್ದು, ದೇಶದ ಏಕತೆಗೆ ಧಕ್ಕೆ ತಂದಂತಹ ಪೋಸ್ಟ್ ಹಾಕಿದ ಕಾರಣ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ದ ಮೇಲೆ BNS 152. 197.3(5) ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಯೂ ಟರ್ನ್ ಹೊಡೆದಿರುವ ವಿದ್ಯಾರ್ಥಿನಿ ತಷಾವುದ್ದ, ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಕಾಮೆಂಟ್‌ಗೆ ಸಂಬಂಧಿಸಿದೆ. ಅದು ಕೆಲವರನ್ನು ನೋಯಿಸಿತು, ಮನನೊಂದಿರುವ ಎಲ್ಲರಿಗೂ ನನ್ನ ಹೃದಯದಿಂದ ಕ್ಷಮೆಯಾಚಿಸುತ್ತೇನೆ. ಹೃದಯದಿಂದ ನಿಜವಾದ ಭಾರತೀಯ ನಾನು. ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ, ಇದು ನನ್ನ ತಾಯ್ನಾಡು. ಭಾರತದಲ್ಲಿ ಹುಟ್ಟಿ ಬೆಳೆದದ್ದು. ನಾನು ಕಮೆಂಟ್ ಮಾಡಿದ್ದು ಮೂರ್ಖತನದ ಕೃತ್ಯವಾಗಿದೆ. ಮತ್ತೊಮ್ಮೆ ನಿಜವಾಗಿಯೂ ಎಲ್ಲರಿಗೂ ಕ್ಷಮೆಯಾಚಿಸಿ, ಭವಿಷ್ಯದಲ್ಲಿ ನಾನು ಎಂದಿಗೂ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಖಚಿತಪಡಿಸುತ್ತೇನೆ. ಜೈ ಹಿಂದ್ ಎಂದು ಪೋಸ್ಟ್ ಮಾಡಿದ್ದಾಳೆ ತಷಾವುದ್ದ. ಸದ್ಯ ತಷಾವುದ್ದ ಮುಂಬೈನಲ್ಲಿರುವ ಮಾಹಿತಿ ಪಡೆದಿದ್ದು, ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.