-ಬಾಲಕಾರ್ಮಿಕ ಯೋಜನಾಧಿಕಾರಿಯಿಂದ ಕಾರ್ಖಾನೆ ವಿರುದ್ಧ ದೂರು ದಾಖಲು । 14 ವರ್ಷದ ಮಕ್ಕಳ ಬಳಕೆ: ರಾಸಾಯನಿಕ ತಗುಲಿ ಮಕ್ಕಳಿಗೆ ಗಂಭೀರ ಗಾಯ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿಯೊಂದರಲ್ಲಿ ಮಕ್ಕಳ ಬಳಕೆ ಹಾಗೂ ಅಪಾಯಕಾರಿ ರಾಸಾಯನಿಕ ತಗುಲಿ ಸುಟ್ಟ ಗಾಯಗಳು ಹಾಗೂ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾರಣದಿಂದಾಗಿ ಬಾಲ-ಕಿಶೋರ ಕಾರ್ಮಿಕ ನಿಷೇಧ ಕಾಯ್ದೆಯಡಿ ಕಂಪನಿ ವಿರುದ್ಧ ದೂರು ದಾಖಲಾಗಿದೆ.
ಕಂಪನಿಯ ನಿಷ್ಕಾಳಜಿ ಖಂಡಿಸಿ, ಮಕ್ಕಳು ಸೇರಿದಂತೆ ಕೆಲವು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕಾರ್ಖಾನೆಯದುರು ಧರಣಿಗೆ ಮುಂದಾದಾಗ, ಮಾಧ್ಯಮಗಳ ಮೂಲಕ ತಮ್ಮ ಬಂಡಾವಳ ಮತ್ತೆಲ್ಲಿ ಬಯಲಾಗುತ್ತದೋ ಎಂದರಿತ ಕಂಪನಿ, ಮನವೊಲೈಸುವ ಪ್ರಯತ್ನ ನಡೆಸಿತ್ತು. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿತ್ತು.
* ಪರಿಸ್ಥಿತಿ ಹದಗೆಡಲು ಸ್ಥಳೀಯ ಮಧ್ಯವರ್ತಿಗಳೂ ಕಾರಣ..?
ಅಪಾಯಕಾರಿ ರಾಸಾಯನಿಕ ಬಳಕೆಯಿಂದ ಗಾಯಗೊಂಡ ಮಕ್ಕಳಿಗೆ ದೊಡ್ಡಾಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಖರ್ಚಿಗೆಂದು 20 ಸಾವಿರ ರು.ಗಳ ಹಣದ ಆಮಿಷವೊಡ್ಡುವ, ತಾವ್ಯಾರೂ ದೂರು ನೀಡದಂತೆ ತಮ್ಮ ಕುಟುಂಬಸ್ಥರನ್ನು ಬೆದರಿಸುವ ತಂತ್ರವೂ ನಡೆದಿದೆ ಎಂದು "ಕನ್ನಡಪ್ರಭ "ದೆದುರು ನೋವು ತೋಡಿಕೊಂಡ ಕಿಶೋರ ವಯಸ್ಸಿನ ಬಾಲಕನೊಬ್ಬ, ಕೂಲಿ ಕಾರ್ಮಿಕರನ್ನು ಕರೆದೊಯ್ಯುವ ಗುತ್ತಿಗೆದಾರರು ತಮ್ಮನ್ನು ಓಲೈಸುವ, ಬೆದರಿಸುವ ಯತ್ನವನ್ನೂ ನಡೆಸಿದ್ದರು. ಕಂಪನಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ, ಮನೆಯಲ್ಲಿ ಕೆಲಸ ಮಾಡುವಾಗ ಗ್ಯಾಸ್ ಸ್ಟೌವ್ ಬೆಂಕಿಯಿಂದಾದ ಗಾಯಗಳು ಎಂದು ಅಧಿಕಾರಿಗಳೆದುರು- ಮಾಧ್ಯಮಗಳೆದುರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆಂದು ಆತ ಆತಂಕ ವ್ಯಕ್ತಪಡಿಸಿದ.
ಕಾರ್ಖಾನೆಗಳಲ್ಲಿನ ಕಾರ್ಮಿಕರ ಸ್ಥಿತಿಗತಿ, ಮಕ್ಕಳ ಬಳಕೆ, ಉತ್ತರ ಭಾರತ ಹಾಗೂ ವಿವಿಧೆಡೆಯಿಂದ ಬರುವ ಕಾರ್ಮಿಕರ ಮಾಹಿತಿ, ಪ್ರತಿಯೊಂದನ್ನು ಇಲ್ಲಿನ ಕಾರ್ಖಾನೆಗಳು ಮುಚ್ಚಿಡುತ್ತಿವೆ. ಕಾಲಕಾಲಕ್ಕೆ ಇದ ತಪಾಸಿಸಬೇಕಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾಗದದಲ್ಲೇ ಪರಿಶೀಲನಾ ಶಾಸ್ತ್ರ ಪೂರೈಸಿ, ತಣ್ಣಗೆ ಕುಳಿತಿದ್ದಾರೆ. ಇಲ್ಲಿ ಕೆಲಸ ಮಾಡಲು ಬರುವ ಕಾರ್ಮಿಕರ ವೈಯುಕ್ತಿಕ ಮಾಹಿತಿ, ವಯೋಮಿತಿ, ಕೌಟುಂಬಿಕ ಹಾಗೂ ಆಯಾ ರಾಜ್ಯಗಳಲ್ಲಿ ಅಪರಾಧ ಹಿನ್ನೆಲೆ ಮುಂತಾದವುಗಳ ಬಗ್ಗೆ ಕೂಲಂಕುಷ ಪರಿಶೀಲಿಸಬೇಕು. ಕಂಪನಿಗಳು ಕೊಡುವ ಕಾರ್ಮಿಕರ ಹೆಸರಿನ ಪಟ್ಟಿಗೂ, ವಾಸ್ತವದಲ್ಲಿ ಅಲ್ಲಿ ಕೆಲಸ ಮಾಡುತ್ತಿರುವವರೂ ತಾಳೆಯಾಗುತ್ತಾರೆಯೇ ? ಕಾಯ್ದೆ ಪ್ರಕಾರ ಅವರಿಗೆ ಎಲ್ಲ ಸೌಕರ್ಯಗಳ ನೀಡಲಾಗುತ್ತಿದೆಯೇ ಎಂಬುದರ ಲೆಕ್ಕ ಪಕ್ಕವಾಗಿರಬೇಕು. ಆದರೆ, ಕಂಪನಿಗಳ "ಕೈ "ಚೆಳಕಕ್ಕೆ ಅಧಿಕಾರಿ ವರ್ಗ ಕೂತಲ್ಲೇ ಲೆಕ್ಕ ಚುಕ್ತಾ ಮಾಡಿ ಮೌನಕ್ಕ ಶರಣಾಗುತ್ತಿರುವುದು ಅನುಮಾನ ಮೂಡಿಸಿದೆ ಎಂಬ ಆರೋಪಗಳ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ ಅಧಿಕಾರಿಗಳ ಕಾರ್ಯವೈಖರಿ ಅನುಮಾನಿಸುವಂತಿತ್ತು.
9ವೈಡಿಆರ್1 : ಸೈದಾಪುರ ಪೊಲೀಸ್ ಠಾಣೆಯ ಹೊರನೋಟ.
9ವೈಡಿಆರ್2 : ಕನ್ನಡಪ್ರಭ ಪ್ರಕಟಿಸಿದ ವರದಿ.