ಕಂಪ್ಲಿ: ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನೊಬ್ಬ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ನೇತೃತ್ವದ ತಂಡ ಮಂಗಳವಾರ ಶಾಲೆಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿತು.
ಅತ್ಯಾಚಾರ ಆರೋಪದ ಘಟನೆ ಮುಖ್ಯಶಿಕ್ಷಕರಿಗೆ ಸೇರಿದಂತೆ ಶಾಲೆಯ ಶಿಕ್ಷಕರಿಗೆ ತಿಳಿದಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ಮೌನ ವಹಿಸಿರುವ ಆರೋಪವೂ ಕೇಳಿಬಂದಿದೆ.
ಇಬ್ಬರು ಶಿಕ್ಷಕರನ್ನು ಹೊರತುಪಡಿಸಿ ಉಳಿದ ಕೆಲ ಶಿಕ್ಷಕರಿಂದ ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆದಿರುವುದಾಗಿ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಕೆಲ ಸಂದರ್ಭಗಳಲ್ಲಿ ಲೈಂಗಿಕ ಪ್ರಚೋದನೆಗೆ ಒಳಪಡಿಸಿರುವ ಆರೋಪಗಳೂ ಕೇಳಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕಿಯರಿಗೆ ಈ ವಿಷಯಗಳು ತಿಳಿದಿದ್ದರೂ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡದಿರುವುದು ಮಕ್ಕಳ ರಕ್ಷಣಾ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ.ಅತಿಥಿ ಶಿಕ್ಷಕರ ಪೂರ್ವ ಇತಿಹಾಸ ಹಾಗೂ ನಡತೆ ಕುರಿತು ಮಾಹಿತಿ ಇದ್ದರೂ ಅವರನ್ನು ನೇಮಕ ಮಾಡಿರುವುದು ಪ್ರಶ್ನಾರ್ಥಕವಾಗಿದೆ. ಎಸ್‌ಡಿಎಂಸಿ ಸದಸ್ಯರ ಆರೋಪದಂತೆ ಮುಖ್ಯಶಿಕ್ಷಕರು ನಿಯಮಿತವಾಗಿ ಶಾಲೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿರುವುದರಿಂದ ಶಾಲೆಯ ಶೈಕ್ಷಣಿಕ ಹಾಗೂ ಶಿಸ್ತು ವಾತಾವರಣ ಹದಗೆಟ್ಟಿದೆ ಎಂದು ತಿಳಿಸಲಾಯಿತು. ಘಟನೆ ಕುರಿತು ಸಮಗ್ರ ವಿಚಾರಣೆ ನಡೆಸದೇ ಮುಖ್ಯಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಿರುವ ಕ್ರಮಕ್ಕೂ ಆಕ್ಷೇಪ ವ್ಯಕ್ತವಾಯಿತು.
ಪರಿಶೀಲನೆ ವೇಳೆ ಸಂಗ್ರಹಿಸಿದ ಎಲ್ಲ ಮಾಹಿತಿಯನ್ನು ವಿವರವಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಮಕ್ಕಳ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಸುಧಾ, ಮಕ್ಕಳ ಸಹಾಯವಾಣಿ ಸಂಯೋಜಕ ಕೆ. ಆನಂದ್, ಸಿಬ್ಬಂದಿ ರವಿಕುಮಾರ್, ಅಕ್ಕ ಪಡೆ ಸದಸ್ಯರಾದ ರಮ್ಯಾ, ಗಿರಿಜಾ, ಶರಾವತಿ, ಇಸಿಒಗಳಾದ ಎಂ. ರೇವಣ್ಣ, ಟಿ.ಎಂ. ಬಸವರಾಜ, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.