ಪುಸ್ತಕದ ಹೊರೆಗೆ ವಿದ್ಯಾರ್ಥಿಯ ಕೈ ಊತ: ಶಿಕ್ಷಣ ಇಲಾಖೆಗೆ ದೂರು

KannadaprabhaNewsNetwork |  
Published : Jan 08, 2026, 02:30 AM IST
ಚಿಕಿತ್ಸೆ ಪಡೆದ ಬಾಲಕ. | Kannada Prabha

ಸಾರಾಂಶ

ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಬೇಕೆಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ನಗರದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಬೇಕೆಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ನಗರದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಭಾರವಾದ ಶಾಲಾ ಬ್ಯಾಗ್ ಹೊತ್ತು 6ನೇ ತರಗತಿಯ ವಿದ್ಯಾರ್ಥಿಯೋರ್ವನ ಕೈ ಊದಿಕೊಂಡು, ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ.

ನಗರದ ಖಾಸಗಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಸಮರ್ಥ ನಾಯ್ಕ ಎಂಬ ಬಾಲಕನೇ ಅಸ್ವಸ್ಥಗೊಂಡ ವಿದ್ಯಾರ್ಥಿ.

ಸಮರ್ಥ ಪ್ರತಿನಿತ್ಯ ಶಾಲೆಗೆ ಬರುವಾಗ ಪಠ್ಯ ಪುಸ್ತಕ ಮತ್ತು ನೋಟ್ಸ್‌ಗಳ ಭಾರವಾದ ಬ್ಯಾಗ್ ಹೊತ್ತುಕೊಂಡು ಬರುತ್ತಿದ್ದ. ಈ ಅತಿಯಾದ ಭಾರದಿಂದಾಗಿ ಬಾಲಕನ ತೋಳಿನ ಎಲುಬಿಗೆ ಒತ್ತಡ ಬಿದ್ದು ಪೆಟ್ಟಾಗಿದ್ದು, ಭುಜ ಹಾಗೂ ಕೈ ಊದಿಕೊಂಡಿದೆ. ವಿಪರೀತ ನೋವು ಕಾಣಿಸಿಕೊಂಡ ಹಿನ್ನೆಲೆ ಬಾಲಕನನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವೈದ್ಯರು ಬಾಲಕನನ್ನು ಪರೀಕ್ಷಿಸಿ, ಇಷ್ಟು ಚಿಕ್ಕ ವಯಸ್ಸಿಗೆ ಕೈ ಊದಿಕೊಳ್ಳಲು ಕಾರಣವೇನೆಂದು ಪ್ರಶ್ನಿಸಿದ್ದಾರೆ. ಆಗ ಬಾಲಕ ಶಾಲಾ ಬ್ಯಾಗ್ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲಿದ್ದವರು ಬ್ಯಾಗ್ ಎತ್ತಿ ನೋಡಿದಾಗ, ಅದು ವಿದ್ಯಾರ್ಥಿಯ ದೇಹದ ಸಾಮರ್ಥ್ಯಕ್ಕಿಂತಲೂ ಹೆಚ್ಚು ತೂಕವಿರುವುದು ದೃಢಪಟ್ಟಿದೆ. ವೈದ್ಯರು ಬಾಲಕನಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.

ಘಟನೆ ಬಗ್ಗೆ ತಿಳಿದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿ ಭಾರದ ಪಠ್ಯದಿಂದ ಮಕ್ಕಳಿಗೆ ಬೆನ್ನು ನೋವು ಸೇರಿದಂತೆ ಆರೋಗ್ಯ ಸಮಸ್ಯೆ ಶುರುವಾಗುತ್ತಿವೆ. ಮಕ್ಕಳ ಮೇಲೆ ಇಂಥ ಹೊರೆ ಹೇರಬಾರದು ಎಂದು ಆಗ್ರಹಿಸಿದ್ದಾರೆ.

ತಕ್ಷಣವೇ ಅವರು ಶಿಕ್ಷಣ ಇಲಾಖೆಯ ಜಂಟಿ ಆಯುಕ್ತ ಈಶ್ವರ ಉಳಾಗಡ್ಡಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಉಳಾಗಡ್ಡಿ, "ಮಕ್ಕಳು ಆಯಾ ದಿನದ ವೇಳಾಪಟ್ಟಿಗೆ ಸೀಮಿತವಾಗಿರುವ ಪುಸ್ತಕಗಳನ್ನು ಮಾತ್ರ ತರಬೇಕು. ಅಗತ್ಯಕ್ಕಿಂತ ಹೆಚ್ಚಿನ ಪುಸ್ತಕ ಹೊತ್ತು ತರದಂತೆ ನೋಡಿಕೊಳ್ಳಲು ಶಾಲಾ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ