ಕುಮಟಾ-ಶಿರಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ಆಕ್ರೋಶ
ಕನ್ನಡಪ್ರಭ ವಾರ್ತೆ ಕುಮಟಾ
ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಿಂದ ಕವಲು ರಸ್ತೆಗಳಿರುವಲ್ಲಿ ಸಮರ್ಪಕ ಕಾಮಗಾರಿ ಇಲ್ಲ. ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ವಾರದೊಳಗೆ ನಮ್ಮ ಭಾಗದಲ್ಲಿ ಕಾಮಗಾರಿ ನಡೆಯದಿದ್ದಲ್ಲಿ ರಸ್ತೆ ಬಂದ್ ಮಾಡಬೇಕಾಗುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ಬೆಳ್ಳೆಯ ಜಿ.ಜಿ. ಹೆಗಡೆ ಎಚ್ಚರಿಕೆ ನೀಡಿದರು.ತಾಪಂ ಸಭಾಭವನದಲ್ಲಿ ಮಂಗಳವಾರ ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಿಂದ ಜಿಲ್ಲಾ ಮುಖ್ಯರಸ್ತೆ ಹಾಗೂ ಇತರ ಗ್ರಾಮೀಣ ರಸ್ತೆಗಳಿಗೆ ಅಪ್ರೋಚ್ ಸರಿಪಡಿಸುವುದು ಯಾರ ಜವಾಬ್ದಾರಿ ಎಂದು ಜಿ.ಜಿ. ಹೆಗಡೆ ಪ್ರಶ್ನಿಸಿದರು. ಕಾಮಗಾರಿಯ ಆಮೆಗತಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ, ಆಸ್ಪತ್ರೆಯಲ್ಲಿ ಕಳೆದ ತಿಂಗಳು ೧೫೦ಕ್ಕೂ ಹೆಚ್ಚು ಮಂದಿ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳು ಕಳವಳಕಾರಿ ಎಂದರು. ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ ಡಯಾಲಿಸಿಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸೂಕ್ತ ಅಧ್ಯಯನವಾಗಲಿ. ಸಾರ್ವಜನಿಕರೊಂದಿಗೆ ಸೌಜನ್ಯಯುತ ವರ್ತಿಸದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸಂಬಳ ತಡೆದು ಕೊಡಿ ಎಂದರು.
ಶೂ ಸಾಕ್ಸ್ ಅನುದಾನವನ್ನು ಅನುದಾನಿತ ಶಾಲೆಗಳಿಗೆ ಇನ್ನೂ ತನಕ ನೀಡದ ಬಗ್ಗೆ ವಿಧಾನಸಭೆಯಲ್ಲಿ ಶಾಸಕರು ಮಾತನಾಡಬೇಕು ಎಂದು ಧೀರು ಶಾನಭಾಗ ಹೇಳಿದರು.
ಯಶಸ್ವಿನಿ ಯೋಜನೆ ನೋಂದಣಿ ಹಾಗೂ ನವೀಕರಣಕ್ಕೆ ಮಾರ್ಚ್ ೩೧ ರವರೆಗೆ ಅವಕಾಶ ನೀಡಲಾಗಿದೆ. ಅದರೆ ಮಣಿಪಾಲ, ಯೇನಪೋಯದಂತಹ ಪ್ರಸಿದ್ಧ ಆಸ್ಪತ್ರೆಗಳಲ್ಲೂ ಯಶಸ್ವಿನಿ ಯೋಜನೆಯ ನೈಜ ಲಾಭ ಜನರಿಗೆ ಸಿಗುತ್ತಿಲ್ಲ. ನೆಟ್‌ವರ್ಕ್ ಆಸ್ಪತ್ರೆಗಳ ಬಗ್ಗೆ ಜನರಿಗೆ ಮಾಹಿತಿ ಪ್ರಚಾರ ಅಗತ್ಯವಿದೆ. ಆಯುಷ್ಮಾನ ಯೋಜನೆಯ ಸ್ಥಿತಿಯೂ ಹೀಗೇ ಆಗಿದೆ ಎಂಬ ವಿಷಯ ಚರ್ಚೆಯಾಯಿತು.
ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಪ್ರತಿಕ್ರಿಯಿಸಿ, ಈ ವಿಚಾರ ದೇವಾಲಯದ ಪ್ರಸ್ತುತ ಆಡಳಿತ ಸಮಿತಿಯಿಂದ ಆಗಬೇಕಾಗಿದೆ ಎಂದರು. ಭಕ್ತಾದಿಗಳ ಅನುಕೂಲಕ್ಕಾಗಿ ಆಗಬೇಕಾದ ಕೆಲಸ ಇದು. ನೀವು ಪ್ರಸ್ತಾವನೆ ಕಳುಹಿಸಿ ಎಂದು ತಹಸೀಲ್ದಾರರಿಗೆ ಶಾಸಕ ಶೆಟ್ಟಿ ಸೂಚಿಸಿದರು. ಪಶುಸಂಗೋಪನಾಧಿಕಾರಿ ಡಾ. ವಿಶ್ವನಾಥ ಹೆಗಡೆ ಇತರ ಅಧಿಕಾರಿಗಳಿದ್ದರು.