ಕನ್ನಡಪ್ರಭ ವಾರ್ತೆ ಕಲಬುರಗಿ
ಕುಲಸಚಿವ ಆರ್ ಆರ್ ಬಿರಾದಾರ್ ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ್ದು, ಯಾವಕಾರಣಕ್ಕೆ ಜಯಶ್ರೀ ನಾಯಕ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಪೊಲಿಸರು ಈಗಾಗಲೇ ವಿದ್ಯಾರ್ಥಿನಿಯ ಮೊಬೈಲ್ ಹಾಗೂ ಅವಳಿಗೆ ಸಂಬಂಧಿಸಿದ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ಹೇಳಿದ್ದಾರೆ.
ಸಾವಿನ ತನಿಖೆ ಪ್ರಗತಿಯಲ್ಲಿರುವಾಗ ಕೆಲ ವ್ಯಕ್ತಿಗಳು ಉಹಾಪೋಹದ ಮಾಹಿತಿಗಳನ್ನು ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸುವಂತಹ ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವ ವಿದ್ಯಾಲಯದ ಘನತೆಗೆ ಧಕ್ಕೆ ತರುವಂತಹ ಈ ಕೃತ್ಯವನ್ನು ವಿಶ್ವ ವಿದ್ಯಾಲಯವು ಖಂಡಿಸುತ್ತದೆ ಹಾಗೂ ಪೊಲೀಸರು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕುಲಸಚಿವ ಆರ್. ಆರ್. ಬಿರಾದಾರ್ ಆಗ್ರಹಿಸಿದ್ದಾರೆ.ಮೊಬೈಲ್ ಕರೆ ವಿವರ ಕಲೆ ಹಾಕಿರೋ ಪೊಲೀಸ್
ಈ ಘಟನೆಗೆ ಮುನ್ನ ವಿದ್ಯಾರ್ಥಿನಿಯು ವಿವಿಯ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳನ್ನು ಭೇಟಿಯಾಗಿಲ್ಲ, ಕೆಲ ಮಾಧ್ಯಮಗಳಲ್ಲಿ ಈ ಕುರಿತು ತಪ್ಪು ಮಾಹಿತಿ ಪ್ರಸಾರವಾಗಿದೆ ಎಂದು ಬಿರಾದಾರ್ ಹೇಳಿದ್ದಾರೆ.
ಯಾರಿಗಾದರೂ ಲೈಂಗಿಕ ಹಿಂಸೆಯಾದರೆ ದೂರು ಸಲ್ಲಿಸಲು ಹಾಗೂ ವಿಚಾರಣೆಗೆ ಆಂತರಿಕ ದೂರು ಸಮಿತಿ (ಐಸಿಸಿ) ಇದೆ. ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಿಗೆ ಈ ಕುರಿತು ಯಾವುದೇ ಅಧಿಕಾರ ಇರುವುದಿಲ್ಲ.ವಿದ್ಯಾರ್ಥಿನಿ ಜೀವಂತವಿದ್ದರೆ ಅವಳನ್ನು ರಕ್ಷಿಸಬೇಕೆಂಬ ಸದುದ್ದೇಶದಿಂದ ಭದ್ರತಾ ಅಧಿಕಾರಿ ವಿದ್ಯಾರ್ಥಿನಿಯ ಕೋಣೆಯ ಬಾಗಿಲನ್ನು ಮುರಿದು ತೆಗೆದಿದ್ದಾರೆ. ಆ ಸಂದರ್ಭದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಅಲ್ಲಿ ಉಪಸ್ಥಿತರಿರಲಿಲ್ಲ.
ವಸತಿ ನಿಲಯದ ಮೇಲ್ವಿಚಾರಕರು ಮತ್ತು ಕೋಣೆಯಲ್ಲಿ ವಾಸವಿದ್ದ ವಿದ್ಯಾರ್ಥಿನಿಯರ ಸಮ್ಮುಖ ಕೋಣೆಯ ಬಾಗಿಲು ಮುರಿಯಲಾಗಿದೆ. ತಕ್ಷಣ ವೈದ್ಯಾಧಿಕಾರಿಗಳು ಆಗಮಿಸಿ ಜೀವ ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆಯೆಂದು ತಿಳಿಸಿದ್ದಾರೆ. ತಕ್ಷಣ ಮಾಹಿತಿಯನ್ನು ಪೊಲಿಸರಿಗೆ ಮತ್ತು ವಿದ್ಯಾರ್ಥಿನಿ ಪಾಲಕರಿಗೆ ತಿಳಿಸಲಾಗಿದೆ ಎಂದು ಕುಲಸಚಿವ ಆರ್ ಆರ್ ಬಿರಾದಾರ್ ಹೇಳಿದ್ದಾರೆ.