ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾರ್ಥಿಗಳಿಗೆ ಪ್ರತಿ ಹಂತದಲ್ಲೂ ಪೋಷಕರು ಬೆಂಬಲವಾಗಿ ನಿಂತರೆ ಮಾತ್ರ ದೊಡ್ಡ ಸಾಧನೆ ಮಾಡಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಗೆ ವಿವಿಧ ಕೊಡುಗೆ ನೀಡಿದ ದಾನಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉಳ್ಳವರು ಹೆಚ್ಚು ಹಣ ಖರ್ಚು ಮಾಡಿ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಾರೆ ಎಂಬ ಭಾವನೆ ಇದೆ. ಆದರೆ, ನಾನು ನಿಮ್ಮಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಈಗ ಜಿಲ್ಲಾಧಿಕಾರಿಯಾಗಿ ಇಲ್ಲಿ ನಿಂತಿದ್ದೇನೆ ಎಂದರು.
ನಾವು ಓದುವಾಗ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ನಿಮಗೆ ಬಿಸಿಯೂಟ, ಕುಳಿತು ಊಟ ಮಾಡಲು ನೆಲಹಾಸು ಹಾಗೂ ಮೇಲ್ಚಾವಣಿ ವ್ಯವಸ್ಥೆ ಎಲ್ಲ ಇದೆ. ಇಷ್ಟೆಲ್ಲಾ ಅನುಕೂಲತೆಗಳಿರುವಾಗ ನೀವು ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನದತ್ತ ಹೆಜ್ಜೆ ಹಾಕಬೇಕು ಎಂದರು.ಲಕ್ಷ್ಮಿ ಅಶ್ವಿನ್ ಗೌಡ, ಅಭಿಷೇಕ್ ಗೌಡ ಎಸ್ಸೆಸ್ಸೆಲ್ಸಿಯನ್ನು ಈ ಶಾಲೆಯಲ್ಲಿ ಓದುವಾಗ ನನಗೆ ಪರಿಚಿತರು. ಈ ಶಾಲೆಯಲ್ಲಿ ಓದಿ ಒಳ್ಳೆಯ ಪ್ರತಿಭೆಯೊಂದಿಗೆ ಹೊರಬಂದು ಸಾಧನೆ ಮಾಡಿ ಇಲ್ಲಿ ಓದುವ ಇತರ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದರು.
ಈ ಶಾಲೆ ಜೊತೆಗೆ ನನಗೆ ಅವಿನಾಭಾವ ಸಂಬಂಧವಿದೆ. ನನ್ನ ತಂದೆ ಸಮಾನರು, ಗುರು ಮಾರ್ಗದರ್ಶಕರಾದ ಜವರೇಗೌಡರು ಊರು, ಶಾಲೆ ಬಗ್ಗೆ ಬಹಳ ಅಭಿಮಾನದಿಂದ ಮಾತನಾಡುತ್ತಿದ್ದರು. 600 ವಿದ್ಯಾರ್ಥಿಗಳು ಓದುತ್ತಿರುವ ಈ ಶಾಲೆ ನೋಡಿದರೆ ಸಂತೋಷವಾಗುತ್ತದೆ ಎಂದರು.ಈ ಶಾಲೆಗೆ ವಿದ್ಯಾರ್ಥಿಗಳು ಎಷ್ಟು ಮುಖ್ಯವೋ ಅವರಲ್ಲಿನ ಪ್ರತಿಭೆ ಹೊರತಂದು ಸೂಕ್ತ ವೇದಿಕೆ ಕಲ್ಪಿಸಿ ಸಮಾಜಕ್ಕೆ ಒಂದು ಅಮೂಲ್ಯ ವ್ಯಕ್ತಿಯನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ಹೊಂದಿರುವ ಶಿಕ್ಷಕರು ಅಷ್ಟೇ ಮುಖ್ಯ. ಪೋಷಕರು ಪ್ರತಿ ಹಂತದಲ್ಲೂ ತಮ್ಮ ಮಕ್ಕಳಿಗೆ ಬೆಂಬಲ ನೀಡಿದರೆ ಸಾಧನೆ ಮಾಡಲು ಸಾಧ್ಯ ಎಂದರು.
ಶಾಲೆ ಶಿಕ್ಷಕ ಬಸವರಾಜು ಮಾತನಾಡಿ, ನಮ್ಮ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಡೀಸಿ ಕುಮಾರ ಅವರು ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಲ್ಯಾಪ್ ಟಾಪ್ ವಿತರಿಸಿದರು ಎಂದರು.ಓದಿದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಹಾಗೂ ವೈದ್ಯರಾಗಿ ಸೇರಿದಂತೆ ಹಲವು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಈಗ ನಮ್ಮ ಶಾಲೆಗೆ ಸುಮಾರು 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಡೆಸ್ಕ್ , ಊಟ ಮಾಡಲು ನೆಲಕ್ಕೆ ಮೊಸಾಯಿಕ್ ಹಾಗೂ ಶಾಲೆ ಆವರಣದ ಮೇಲ್ಚಾವಣಿ ಸೀಟು ಹಾಕಿಸಿದ್ದಾರೆ ಎಂದು ಕೊಡುಗೆ ಸ್ಮರಿಸಿದರು.
ಇದೇ ವೇಳೆ ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬಂದ ಗಣ್ಯರನ್ನು ಪೂರ್ಣ ಕುಂಭದೊಡನೆ ಪುಷ್ಪಾರ್ಚನೆ ಮೂಲಕ ಶಾಲಾವರಣಕ್ಕೆ ಕರೆತರಲಾಯಿತು. ತಾಪಂ ಇಒ ಶ್ರೀನಿವಾಸ, ಬಿಇಒ ಉಮಾ, ಅಜಯ್ ಕುಮಾರ್, ಮುಖ್ಯ ಶಿಕ್ಷಕಿ ಶಕುಂತಲಾ, ಪುಟ್ಟಸ್ವಾಮಿ, ಮುಖಂಡರಾದ ಜವರೇಗೌಡ, ಸಿದ್ದಾಚಾರಿ, ತೊರೆಕಾಡನಹಳ್ಳಿ ಗ್ರಾಪಂ ಅಧ್ಯಕ್ಷ ಟಿ.ಪಿ.ರಾಜು, ಎಸ್ ಡಿಎಂಸಿ ಅಧ್ಯಕ್ಷ ನಂದೀಶ, ಸದಸ್ಯರು, ಶಿಕ್ಷಕರು ಇದ್ದರು.