ನೇಹಾ ಹತ್ಯೆಗೆ ಹಾವೇರಿಯಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಆಕ್ರೋಶ

KannadaprabhaNewsNetwork | Published : Apr 23, 2024 12:58 AM

ಸಾರಾಂಶ

ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಖಂಡಿಸಿ, ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಹಾವೇರಿ: ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಖಂಡಿಸಿ, ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಎಂಜಿ ರಸ್ತೆ, ಜೆಪಿ ಸರ್ಕಲ್‌ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಬೃಹತ್‌ ಮಾನವ ಸರಪಳಿ ನಿರ್ಮಿಸಿದರು. ನೇಹಾ ಹತ್ಯೆಗೆ ನ್ಯಾಯ ಕೊಡಿಸಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಹಾಕಿ, ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಹಾಗೂ ಆರೋಪಿಗಳ ಪರ ಮಾತನಾಡುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಎಬಿವಿಪಿ ‌ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ ಮಾತನಾಡಿ, ಸಹೋದರಿ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಂಡನೀಯ. ಕಾಂಗ್ರೆಸ್ ಕಾರ್ಪೊಟರ್‌ಗೆ ರಾಜ್ಯ ಸರ್ಕಾರದಿಂದ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ನೇಹಾ ಹತ್ಯೆ ಪ್ರಕರಣದ ತನಿಖೆಯೇ ಇನ್ನೂ ಆರಂಭವಾಗಿಲ್ಲ. ಈಗಲೇ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಇದು ರಾಜಕಾರಣ ಎಂದು ಹೇಳುತ್ತಿದ್ದಾರೆ. ಮತ್ತೊಬ್ಬರು ಇದು ವೈಯಕ್ತಿಕ ಕಾರಣಕ್ಕೆ ನಡೆದ ಹತ್ಯೆ ಎಂದು ಹೇಳುತ್ತಾರೆ. ಎಬಿವಿಪಿ ಕಾರ್ಯಕರ್ತರು ಚುನಾವಣೆಗೆ ನಿಂತಿಲ್ಲ. ನಮಗೆ ರಾಜಕಾರಣ ಬೇಕಿಲ್ಲ. ಸಹೋದರಿ ನೇಹಾ ಹತ್ಯೆಗೆ ನ್ಯಾಯ ಕೇಳುತ್ತಿದ್ದೇವೆ. ಪ್ರಕರಣವನ್ನು ಸಿಬಿಐಗೆ ವಹಿಸಿ, ಆರೋಪಿ ಶೂಟೌಟ್‌ಗೆ ಪೊಲೀಸರಿಗೆ ಅಧಿಕಾರ ಕೊಡಿ ಎಂದು ಆಗ್ರಹಿಸಿದರು. ವಿದ್ಯಾರ್ಥಿ ಮುಖಂಡೆ ಅಪರ್ಣಾ ಕುಲಕರ್ಣಿ ಮಾತನಾಡಿ, ಲವ್‌ ಜಿಹಾದ್‌ ಹೆಸರಿನಲ್ಲಿ ನಮ್ಮ ಹೆಣ್ಣು ಮಕ್ಕಳು ಹತ್ಯೆಗೀಡಾಗುತ್ತಿದ್ದಾರೆ. ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗುತ್ತಿದೆ. ನೇಹಾ ಹತ್ಯೆಗೆ ನ್ಯಾಯ ಸಿಗಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡು, ನೇಹಾ ಪ್ರಕರಣದಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗುವ ವರೆಗೂ ಹೋರಾಟ ನಡೆಸುವುದಾಗಿ ಹೇಳಿದರು. ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ಬಳಿಕ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು. ಇದೇ ವೇಳೆ ವಿಶ್ವ ಹಿಂದೂ ಪರಿಷತ್‌ನಿಂದ ಎಸ್‌.ಆರ್‌. ಹೆಗಡೆ ನೇತೃತ್ವದಲ್ಲಿ ಮನವಿಪತ್ರ ಸಲ್ಲಿಸಲಾಯಿತು.

ಎಬಿವಿಪಿ ತಾಲೂಕು ಸಂಚಾಲಕ ನವೀನ ಜಿ.ಕೆ., ನಗರ ಕಾರ್ಯದರ್ಶಿ ನಾಗರಾಜ್ ಪುರವಂತಿಗೌಡ್ರ, ವಿದ್ಯಾರ್ಥಿ ಸಂಘಟನೆ ಪ್ರಮುಖರಾದ ನಾಗರಾಜ್ ಬ್ಯಾಡಗಿ, ದೀಪಾ, ರಾಕೇಶ್ ಭಂಗಿಗೌಡ್ರ, ಪ್ರವೀಣ ಅಂಗರಗಟ್ಟಿ, ಯುವರಾಜ್, ಯೋಗೇಶ್, ಕಿರಣ ಶೀಗಿಹಳ್ಳಿ, ಸುದೀಪ ಕೋರವರ , ಕಾರ್ತಿಕ್ ಬೊಮ್ಮನಹಳ್ಳಿ, ಸಿದ್ದು ಹಿರೇಮಠ, ಲಿಂಗರಾಜ್ ಬಿದಿಮನಿ, ಕರಬಸಪ್ಪ ಹಳ್ಳಿ, ಸಾಗರ್, ಶಿವಾಜಿ, ಅಕ್ಷಯ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this article