ವಿದ್ಯಾರ್ಥಿಗಳು ಜಾತಿವಾದಿ ಆಗದೆ, ಜಾತ್ಯತೀತರಾಗಿ

KannadaprabhaNewsNetwork | Published : Jul 14, 2024 1:33 AM

ಸಾರಾಂಶ

ಬದಲಾಗುತ್ತಿರುವ ಜಗತ್ತಿನಲ್ಲಿ ಮಾನವೀಯತೆ ನಶಿಸದಂತೆ ಕಾಪಾಡುವ ಹೊಣೆ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಮಾನವೀಯತೆ ಗುಣದ ಜತೆಗೆ ಬುದ್ಧ, ಬಸವ ಅಂಬೇಡ್ಕರ್‌ ತತ್ವ ಅಳವಡಿಸಿಕೊಳ್ಳಬೇಕು ಎಂದು ಸಚಿವ ಸಂತೋಷ ಲಾಡ್‌ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಕಲಘಟಗಿ:

ವಿದ್ಯಾರ್ಥಿಗಳು ಜಾತಿವಾದಿಗಳಾಗಬೇಡಿ. ಜಾತ್ಯತೀತವಾಗಿರಿ. ಸಂವಿಧಾನ ಗೌರವಿಸುವ ಜತೆಗೆ ದೇಶ ಕಟ್ಟುವ ಕೆಲಸ ಮಾಡಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್‌, ರೋವರ್ಸ್, ಯುವ ರೆಡ್ ಕ್ರಾಸ್ ಮತ್ತು ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬದಲಾಗುತ್ತಿರುವ ಜಗತ್ತಿನಲ್ಲಿ ಮಾನವೀಯತೆ ನಶಿಸದಂತೆ ಕಾಪಾಡುವ ಹೊಣೆ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಮಾನವೀಯತೆ ಗುಣದ ಜತೆಗೆ ಬುದ್ಧ, ಬಸವ ಅಂಬೇಡ್ಕರ್‌ ತತ್ವ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಕ್ಕಳು ಸಾಮಾಜಿಕ ಜಾಲತಾಣಗಳ ಹಾವಳಿಗೆ ಒಳಗಾಗದೇ ಎಲ್ಲರನ್ನು ಪ್ರೀತಿಸುವ ಹಾಗೂ ಮಾನವೀಯತೆ ಸದ್ಗುಣ ಬೆಳೆಸಿಕೊಳ್ಳಬೇಕು ಎಂದ ಸಚಿವರು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಭಾರತ ಒಕ್ಕೂಟ ದೇಶವಾಗಿದ್ದು ಇಲ್ಲಿ ಎಲ್ಲರೂ, ಎಲ್ಲ ಧರ್ಮಗಳು ಒಂದೇ ಆಗಿವೆ. ದೇಶ ಕಟ್ಟಬೇಕಿದ್ದರೆ ಬಸವಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ತತ್ವಾದರ್ಶ ಪಾಲಿಸಬೇಕಿದೆ. ಸಮಾಜದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ, ಜಾತಿ ವ್ಯವಸ್ಥೆ ದೂರ ಮಾಡುವುದು ಯುವಕರ ಕೈಯಲ್ಲಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿನಿ ನೇತ್ರಾವತಿ ನೇಸ್ರೇಕರಗೆ ₹ 25 ಸಾವಿರ ಹಾಗೂ ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಚಿವ ಸಂತೋಷ ಲಾಡ್ ತಲಾ ₹ 5 ಸಾವಿರದ ಚೆಕ್ ವಿತರಿಸಿದರು. ಅಲ್ಲದೇ ಕಾಲೇಜಿಗೆ 300 ಕುರ್ಚಿ, ಡೆಸ್ಕ್, ಕುಡಿಯುವ ನೀರಿನ ಸೌಲಭ್ಯ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತಸುವುದಾಗಿ ಭರವಸೆ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಹರೀಶ ಮಠದ, ಸೋಮಶೇಖರ, ಬೆನ್ನೂರು ಬಿ.ವೈ. ಪಾಟೀಲ, ನರೇಶ ಮಲೇನಾಡು, ಬಾಬು ಅಂಚಟಗೇರಿ, ಕಾಲೇಜು ಅಭಿವೃದ್ಧಿ ಸಮಿತಿಯ ಎಸ್.ವಿ. ತಡಸಮಠ, ಮಹಾಬಲೇಶ್ವರ ಡೊಂಗ್ರೆ, ಸಾಯಿನಾಥ ಯಲ್ಲಾಪುರಕರ, ಶಿವಲಿಂಗಪ್ಪ ಮೂಗಣ್ಣವರ, ಮಲ್ಲಿಕಾರ್ಜುನ ದೊಡ್ಡಮನಿ, ಸಂಜಯ ಮೊಕಾಶಿ, ಸುನೀಲ ಧನಿಗೊಂಡ, ಶಿವಾನಂದ ಮುತ್ತಗಿ, ಅಜ್ಮತ ಜಾಗೀರ್ದಾರ್, ರಾಘವೇಂದ್ರ ಭೀಮಪ್ಪನವರ, ತಾಪಂ ಇಒ ಪರಶುರಾಮ ಸಾವಂತ, ಪ್ರಾಂಶುಪಾಲ ಬಿ.ಪಿ. ಮಠದ, ಪ್ರೊ. ಸಲೇಶಾ ಬೆಳಗಾಂ ಸೇರುದಂತೆ ಇತರರು ಇದ್ದರು.

Share this article